ಉ.ಕ ಸುದ್ದಿಜಾಲ ಅಥಣಿ :

ಬೆಳಗಾವಿ ಜಿಲ್ಲೆಯ ಅಥಣಿ ಸಮುದಾಯ ಆಸ್ಪತ್ರೆಯ ಸಿಬ್ಬಂದಿ ಮೇಲಿನ ಹಲ್ಲೆಯನ್ನು ಖಂಡಿಸಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಆಶಾ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆರೋಪಿಯ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಬುಧವಾರ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿರುವ ಸಮುದಾಯ ಆಸ್ಪತ್ರೆ ಮುಂದೆ ತಾಲೂಕಿನ ಸಮಸ್ತ ಸರ್ಕಾರಿ ವೈದ್ಯರು ಸಿಬ್ಬಂದಿ ಜೊತೆಯಾಗಿ ಅಥಣಿ ಸಮುದಾಯ ಆಸ್ಪತ್ರೆಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಆರೋಪಿಯನ್ನು ತಕ್ಷಣವೇ ಬಂಧಿಸುವಂತೆ ತೋಳಿಗೆ ಕಪ್ಪು ಬಟ್ಟೆ ಧರಿಸಿ ಆಸ್ಪತ್ರೆ ಎದುರುಗಡೆ ಧರಣಿ ಸತ್ಯಾಗ್ರಹ ನಡೆಸಿದರು.

ಮಂಗಳವಾರ ರಾತ್ರಿ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ ಎಂಬ ಕಾರಣಕ್ಕೆ ಅಥಣಿಯ ಸಮುದಾಯ ಆಸ್ಪತ್ರೆ ಸಿಬ್ಬಂದಿಯಾದ ಬಸವರಾಜ ಘೂಳಪ್ಪನ್ನವರ ಎಂಬುವರ ಮೇಲೆ ವಕೀಲ ದಯಾನಂದ್ ವಾಘ್ಮೋರೆ ಎಂಬುವರು ಅವಾಚ್ಯ ಪದಗಳನ್ನು ನಿಂದಿಸಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದರು.

ಹಲ್ಲೆ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಈ ರೀತಿ ತೊಂದರೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿ ಆರೋಪಿ ಮೇಲೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಅಥಣಿ ಸಮುದಾಯ ಆಸ್ಪತ್ರೆಯ ವೈದಾಧಿಕಾರಿ ಬಸನಗೌಡ ಕಾಗೆ ಮಾತನಾಡಿ, ಕರೋನ ಮಹಾಮಾರಿ ಸಂದಿಗ್ಧ ಪರಿಸ್ಥಿತಿಯಲ್ಲೂ ಕೂಡ ನಾವು ನಮ್ಮ ಜೀವನ ಹಂಗು ತೊರೆದು ಕೆಲಸ ಮಾಡಿದ್ದೇವೆ, ಸಿಬ್ಬಂದಿ ಕೊರತೆ ನಡುವೆ ಸಮಯವನ್ನು ಲೆಕ್ಕಿಸದೆ ಕರ್ತವ್ಯ ಮಾಡುತ್ತಿರುವ ನಮ್ಮ ಸಿಬ್ಬಂದಿ ಮೇಲೆ ಈ ರೀತಿ ಏಕಾಏಕಿ ಹಲ್ಲೆಯನ್ನು ನಾವು ಖಂಡಿಸುತ್ತೇವೆ.

ಸರ್ಕಾರಿ ವೈದ್ಯರ ಮೇಲೆ ಸಿಬ್ಬಂದಿ ಮೇಲೆ ಹಲ್ಲೆಗಳು ಆಗುತ್ತಿರುತ್ತವೆ ಇದಕ್ಕೆಲ್ಲ ಕಡಿವಾಣ ಹಾಕಬೇಕಾದರೆ ಆರೋಪಿತರನ್ನು ಕೂಡಲೇ ಬಂಧನ ಮಾಡಬೇಕೆಂದು ಆಗ್ರಹಿಸಿದರು.

ಅನಂತರ ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ಅಥಣಿ ತಹಶಿಲ್ದಾರ ವಾಣಿ ಯು. ಹಾಗೂ ಡಿವೈಎಸ್ಪಿ ಶ್ರೀಪಾದ ಜಲ್ದೆ ಅವರು ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಹಲ್ಲೆಗೊಳಗಾದವರಿಗೆ ಸೂಕ್ತ ಕಾನೂನಿನ‌ ಪ್ರಕಾರ ನ್ಯಾಯ ಕೊಡಿಸುವುದಾಗಿ ತಿಳಿಸಿದರು.

ಪ್ರತಿಭಟನೆಗೆ ಅಥಣಿ ವೈದ್ಯಾಧಿಕಾರಿಗಳ ಸಂಘ, ತಾಲೂಕು‌ ಸರಕಾರಿ ನೌಕರರ ಸಂಘ ಕೂಡ ಬೆಂಬಲ ನೀಡಿತು, ವೇಳೆ ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ಡಾ. ಸಿ ಎಸ್ ಪಾಟೀಲ, ಡಾ. ಹೆಚ್ ಬಿ ಕಲಮಡಿ, ಡಾ. ಸಂಜೂ ಗುಂಜಿಗಾಂವಿ, ಡಾ. ಗುರುಸಿದ್ದಪ್ಪ,

ಡಾ. ಅವಟಿ, ಡಾ ಮಲ್ಲಿಕಾರ್ಜುನ ಹಂಜಿ, ಡಾ. ಎ ಎ ಪಾಂಗಿ, ಡಾ. ರವಿ ಚೌಗಲಾ, ಡಾ. ರಮೇಶ ಗುಳ್ಳ, ಸಿಬ್ಬಂದಿಗಳಾದ ಪ್ರಕಾಶ ನರಹಟ್ಟಿ, ರಫಿಕ್ ಮುಜಾವರ, ಅಡವಯ್ಯಾ ಹಿರೇಮಠ, ಆಶಾ ಕಾರ್ಯತೆ ಅಮೃತಾ ಡಂಗಿ, ಎಸ್ ಬಿ ಕಾಡಮಟ್ಟಿ ಸೇರಿದಂತೆ ಹಲವು ಸಿಬ್ಬಂಧಿಗಳು ಉಪಸ್ಥಿತರಿದ್ದರು.