ಉ.ಕ‌ ಸುದ್ದಿಜಾಲ ಅಥಣಿ :

ಕನ್ನಡ ನಾಡು, ನುಡಿ ಹಾಗೂ ಭಾಷೆಯ ಬಗ್ಗೆ ಅಪಾರ ಆಸಕ್ತಿ ಹೊಂದಿ, ತಮ್ಮ ವರದಿಗಳ ಮೂಲಕ ಜನಪರ ಸಮಸ್ಯೆಗಳಿಗೆ ಧ್ವನಿಯಾಗುತ್ತಾ ಕನ್ನಡದ ಸೇವೆ ಸಲ್ಲಿಸುತ್ತಿರುವ ಪಬ್ಲಿಕ್ ನೆಕ್ಸ್ಟ್ ವರದಿಗಾರ ಲಕ್ಷ್ಮಣ ಕೋಳಿ ಅವರಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಗಡಿ ಭಾಗದಲ್ಲಿ ಕನ್ನಡ ಭಾಷೆಯ ಉಳಿವು, ಬೆಳವಣಿಗೆ ಹಾಗೂ ಕನ್ನಡಿಗರ ಹಿತಕ್ಕಾಗಿ ತಮ್ಮ ಪತ್ರಿಕಾ ವರದಿಗಳ ಮೂಲಕ ನಿರಂತರವಾಗಿ ಶ್ರಮಿಸುತ್ತಿರುವ ಲಕ್ಷ್ಮಣ ಕೋಳಿ ಅವರ ಸೇವೆಯನ್ನು ಗುರುತಿಸಿ ಸರ್ಕಾರ ಈ ಗೌರವಕ್ಕೆ ಆಯ್ಕೆ ಮಾಡಿದೆ. ಕನ್ನಡ ನಾಡು-ನುಡಿಯ ಬಗ್ಗೆ ಅವರಿಗಿರುವ ಅಭಿಮಾನ ಹಾಗೂ ಜನಪರ ಕಾಳಜಿಗೆ ಈ ಪ್ರಶಸ್ತಿ ಸಂದ ಗೌರವವಾಗಿದೆ.

ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಅಥಣಿಯ ಭೋಜರಾಜ ಕ್ರೀಡಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ನಡೆಯಲಿರುವ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಲಕ್ಷ್ಮಣ ಕೋಳಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.