ಉ.ಕ ಸುದ್ದಿಜಾಲ ಚಿಕ್ಕೋಡಿ :

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸಿದ್ದಾಪೂರವಾಡಿ ಗ್ರಾಮದ ಚಿಕ್ಕೋಡಿ-ಮಿರಜ್ ರಸ್ತೆಯಲ್ಲಿ ಮಹೀಂದ್ರಾ ಥಾರ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮೃತರನ್ನು ಸುಧಾಕರ ರೋಕಡೆ (40) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಅವರ ಪತ್ನಿ ಸ್ವಪ್ನಾ ಸಹ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಚಿಕ್ಕೋಡಿ-ಮಿರಜ್ ರಸ್ತೆಯ ಸಿದ್ದಾಪೂರವಾಡಿ ಗ್ರಾಮದ ಬಳಿ ವೇಗವಾಗಿ ಬಂದ ಮಹೀಂದ್ರಾ ಥಾರ್ ವಾಹನ ಮಧ್ಯೆ ಭೀಕರ ಅಪಘಾತವಾಗಿತ್ತು. ಈ ಅಪಘಾತದ ತೀವ್ರತೆಗೆ ಬೈಕ್ ಸವಾರ ಸುಧಾಕರ ರೋಕಡೆ ಹಾಗೂ ಅವರ ಪತ್ನಿ ಸ್ವಪ್ನಾ ರಸ್ತೆಗೆೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣವೇ ಅವರನ್ನು ಪ್ರಥಮ ಚಿಕಿತ್ಸೆಗಾಗಿ ಚಿಕ್ಕೋಡಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ವೈದ್ಯರು ನಡೆಸಿದ ಚಿಕಿತ್ಸೆ ಫಲಕಾರಿಯಾಗದೆ ಸುಧಾಕರ ಕೊನೆಯುಸಿರೆಳೆದಿದ್ದಾರೆ.

ಸುಧಾಕರನ ಅನಿರೀಕ್ಷಿತ ಸಾವಿನಿಂದಾಗಿ ಸುಧಾಕರ ಅವರ ಕುಟುಂಬದಲ್ಲಿ ಶೋಕ ಮಡುಗಟ್ಟಿದ್ದು, ಕುಟುಂಬಸ್ಥರ ಹಾಗೂ ಬಂಧು-ಬಳಗದವರ ಆಕ್ರಂದನ ಮುಗಿಲು ಮುಟ್ಟಿದೆ. ಮತ್ತೊಂದೆಡೆ, ಗಂಭೀರ ಗಾಯಗೊಂಡಿರುವ ಪತ್ನಿ ಸ್ವಪ್ನಾಳಿಗೆ ಚಿಕಿತ್ಸೆ ಮುಂದುವರಿದಿದೆ.ಅವರಿಗೆ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಮುಂದುವರಿದಿದೆ.

ಮಹೀಂದ್ರಾ ಥಾರ್ ವಾಹನದ ಮಾಲೀಕ ಶಿವರಾಜ ಬಸವರಾಜ ಭಾಸ್ಕರ ವಿರುದ್ಧ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.