ಉ. ಕ ಸುದ್ದಿಜಾಲ ಬೆಳಗಾವಿ :
ಎರಡು ಕಾರುಗಳ ಮಧ್ಯೆ ಸೋಮವಾರ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿರುವ ದಾರುಣ ಘಟನೆ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಬಳಿ ನಡೆದಿದೆ.
ಹಿರೇಬಾಗೇವಾಡಿ ಗ್ರಾಮದ ಅನಿಸ್ ಮುಸ್ತಾಕ್ ಸೈಯದ್ (ಕಾರ್ ಚಾಲಕ– 30), ಇವರ ಪತ್ನಿ ಅಯಿಮಾನ್ ಅನಿಸ್ ಸೈಯದ್(24), ಪುತ್ರ ಅಹ್ಮದ್ ಅನಿಸ್ ಸೈಯದ್ (1.5) ಮೃತರು. ಅನಿಸ್ ಅವರ ಸಹೋದರಿ ಆಯಿಷಾ ಅನ್ವರ್ ಸೈಯದ್ ತೀವ್ರ ಗಾಯಗೊಂಡಿದ್ದು, ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಐವರು ಕಾರಿನಲ್ಲಿ ಗೋಕಾಕದಿಂದ ತಮ್ಮೂರು ಹಿರೇಬಾಗೇವಾಡಿಗೆ ಬರುತ್ತಿದ್ದರು. ಆಗ ಎದುರಿಗೆ ಎರಡು ಕಾರುಗಳು ಬರುತ್ತಿದ್ದವು. ಒಂದು ಕಾರು ಮತ್ತೊಂದು ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಮೃತರ ಕಾರಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಕಾರಿನಲ್ಲಿ ಸವದತ್ತಿ ಕ್ಷೇತ್ರದ ಮಾಜಿ ಶಾಸಕ ಆರ್. ವಿ. ಪಾಟೀಲ್ ಅವರ ಕಾರು ಎಂದು ಬರೆದ ಪತ್ರ ಸಿಕ್ಕಿದೆ.
ಇದರಲ್ಲಿದ್ದ ಮಾಜಿ ಶಾಸಕರ ಪುತ್ರ ಹಾಗೂ ಇನ್ನೊಬ್ಬ ಸವಾರನಿಗೂ ಗಾಯಗಳಾಗಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಕ್ಕಿ ರಭಸಕ್ಕೆ ಅನಿಸ್ ಅವರ ಕಾರು ರಸ್ತೆಯ ಬದಿಯ ಹೊಲದಲ್ಲಿ ಪಲ್ಟಿ ಹೊಡೆದಿದೆ. ಮಾಜಿ ಶಾಸಕರ ಕಾರು ಕೂಡ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಶವಗಳನ್ನು ಹೊರತೆಗೆದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.
ಹಿರೇಬಾಗೇವಾಡಿ ಮತ್ತು ಬೈಲಹೊಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಎರಡು ಕಾರುಗಳ ಮಧ್ಯ ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ಸಾವು
