ಉ.ಕ ಸುದ್ದಿಜಾಲ ಬೆಳಗಾವಿ :

ರಾಜ್ಯದಲ್ಲಿ ಭೀಕರ ಬರಗಾಲದಿಂದ ಜನರು ಬೇಸತ್ತಿದ್ದಾರೆ. ಸನದಲ್ಲಿ ಚರ್ಚೆ‌ ಮಾಡಬೇಕಿದ್ದ ಕರ್ನಾಟಕದ ಸಚಿವರು ತೆಲಂಗಾಣಕ್ಕೆ‌ ಹೋಗಿ ಅಲ್ಲಿನ ಶಾಸಕರ ಚಾಕರಿ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ ಸಚಿವರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಬರಗಾಲದ ಬಗ್ಗೆ ಹಾಗೂ ಸಂಕಷ್ಟದಲ್ಲಿರುವ ರೈತರಿಗೆ ಸಾಂತ್ವನ ಹೇಳಲು ಸಚಿವರು ತೆರಳಬೇಕಿತ್ತು. ಉತ್ತರ ಕರ್ನಾಟಕಕ್ಕೆ ಬಂದು ಸರಕಾರ ಏನು ಮಾಡಿದೆ ಅಂತ‌ ಹೇಳಬೇಕಿತ್ತು.

ಆದರೆ ಯಾವೊಬ್ಬ ಸಚಿವರು ಸದನಕ್ಕೆ ಬರುತ್ತಿಲ್ಲ ಎಂದು ಹರಿಹಾಯ್ದರು. ಪಂಚರಾಜ್ಯ‌ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲ ರಾಜ್ಯಗಳಲ್ಲೂ ಸೋತಿದ್ದಾರೆ. ತೆಲಂಗಾಣ ಒಂದೇ ರಾಜ್ಯದಲ್ಲಿ ಗೆದ್ದಿದ್ದಾರೆ. ಎಲ್ಲರೂ ತೆಲಂಗಾಣಕ್ಕೆ ಹೋಗಿ ಕೂತಿದ್ದಾರೆ.

ಇಲ್ಲಿ ಮರ್ಯಾದೆ ಹೋಗುತ್ತೆ ಎಂದು ಅಲ್ಲಿಗೆ ಹೋಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಸಚಿವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಕರ್ನಾಟಕದ ಜನ ಇಲ್ಲಿ‌ ಸಂಕಷ್ಟದಲ್ಲಿರುವಾಗ ಸಚಿವರು ಮೋಜು ಮಸ್ತಿ ಮಾಡೋದು ಸರಿಯಲ್ಲ. ಇದು ನಾಚಿಗೇಡಿತನದ ಸಂಗತಿ. ಕೂಡಲೇ ಅವರೆಲ್ಲರನ್ನೂ ವಾಪಾಸ್ ಕರೆಸಬೇಕು ಎಂದು ಒತ್ತಾಯಿಸಿದರು.