ಉ.ಕ ಸುದ್ದಿಜಾಲ ಬೆಳಗಾವಿ :

• ಅಧಿವೇಶನಕ್ಕೆ 28 ಕೋಟಿ ರೂಪಾಯಿ ಪೋಲು!
• ಗಂಟೆಗೆ 24 ಲಕ್ಷ ರೂ. ಖರ್ಚು!
• ಅಭಿವೃದ್ಧಿ ಚರ್ಚೆ ಶೂನ್ಯ; ಭೀಮಪ್ಪ ಗಡಾದ್ ಕಿಡಿ!
• ತೆರಿಗೆ ಹಣ ಹೋಟೆಲ್ ಮಾಲೀಕರ ಪಾಲು!

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕಳೆದ ಡಿಸೆಂಬರ್ 9 ರಿಂದ 19 ರವರೆಗೆ ನಡೆದ 10 ದಿನಗಳ ಚಳಿಗಾಲದ ಅಧಿವೇಶನದ ಪ್ರತಿ ಗಂಟೆಗೆ 24 ಲಕ್ಷ ರೂಪಾಯಿ ಪೋಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಅವರು ಆರೋಪಿಸಿದ್ದಾರೆ.

ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಈ ಬಾರಿಯ ಅಧಿವೇಶನಕ್ಕೆ ರಾಜ್ಯದ ಬೊಕ್ಕಸದಿಂದ ಒಟ್ಟು 27,78,56,669 (ಸುಮಾರು 28 ಕೋಟಿ) ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಕೇವಲ 115 ಗಂಟೆ 45 ನಿಮಿಷಗಳ ಕಾಲ ನಡೆದ ಉಭಯ ಸದನಗಳ ಕಲಾಪವನ್ನು ಲೆಕ್ಕ ಹಾಕಿದರೆ.

ಸರ್ಕಾರ ಪ್ರತಿ ಒಂದು ಗಂಟೆಗೆ ಅಂದಾಜು 24 ಲಕ್ಷ ರೂಪಾಯಿಗಳನ್ನು ವ್ಯಯಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರತಿ ಗಂಟೆಯ ವೆಚ್ಚದಲ್ಲಿ 4 ಲಕ್ಷ ರೂ.ಗಳಷ್ಟು ಏರಿಕೆಯಾಗಿರುವುದು ಕಳವಳಕಾರಿ ಸಂಗತಿಯಾಗಿದೆ.

ಅಧಿವೇಶನದ ವೆಚ್ಚದ ವಿವರಗಳನ್ನು ಗಮನಿಸಿದರೆ, ಗಣ್ಯರ ವಸತಿಗಾಗಿ 783 ಲಕ್ಷ, ಊಟ-ಉಪಹಾರಕ್ಕಾಗಿ 275 ಲಕ್ಷ, ಪೊಲೀಸ್ ಭದ್ರತೆಗಾಗಿ 924 ಲಕ್ಷ ಹಾಗೂ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳಿಗಾಗಿ 687 ಲಕ್ಷ ರೂಪಾಯಿಗಳನ್ನು ಬಳಸಲಾಗಿದೆ. ಜನಪ್ರತಿನಿಧಿಗಳಿಗೆ ಕಿಲೋಮೀಟರ್‌ಗೆ 35 ರೂ. ಪ್ರಯಾಣ ಭತ್ಯೆ ಹಾಗೂ ದಿನಕ್ಕೆ 2500 ರೂ. ದಿನಭತ್ಯೆ ನೀಡಲಾಗುತ್ತಿದೆ.

ಆದರೆ, ಈ ಭಾಗದ ಜನರ ನಿರೀಕ್ಷೆಯಂತೆ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಗಂಭೀರ ಚರ್ಚೆಗಳು ನಡೆಯುವ ಬದಲು, ತೆರಿಗೆದಾರರ ಹಣವು ಹೋಟೆಲ್ ಮಾಲೀಕರು ಮತ್ತು ಗುತ್ತಿಗೆದಾರರ ಪಾಲಾಗುತ್ತಿದೆ ಎಂದು ಗಡಾದ್ ಕಿಡಿಕಾರಿದ್ದಾರೆ. ಅಲ್ಲದೆ, ಅಧಿವೇಶನಕ್ಕಾಗಿ ಶ್ರಮಿಸುವ ಸ್ಥಳೀಯ ಸಿಬ್ಬಂದಿಗಳಿಗೆ ಯಾವುದೇ ವಿಶೇಷ ಭತ್ಯೆ ನೀಡದೆ ನಿರ್ಲಕ್ಷಿಸಲಾಗುತ್ತಿದೆ ಎಂಬ ಆರೋಪವನ್ನು ಕೂಡ ಮಾಡಿದ್ದಾರೆ..