ಉ.ಕ ಸುದ್ದಿಜಾಲ ಚಾಮರಾಜನಗರ : 

ಗರ್ಭಿಣಿಯೊಬ್ಬರನ್ನು ತಾಳಿ ಕಟ್ಟಿದ ಪತಿಯೇ ಕೊಲೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಡೊಳ್ಳಿಪುರದ ತೋಟದ ಮನೆಯಲ್ಲಿ ನಡೆದಿದೆ.

ಈ ಕುರಿತು ಎಸ್ಪಿ ಡಾ. ಬಿ. ಟಿ. ಕವಿತಾ ಅವರು ಮಾತನಾಡಿದ್ದು, ಮಹಿಳೆಯ ಕೊಲೆ ಕುರಿತು ಕಂಟ್ರೋಲ್ ರೂಮ್ಗೆ ಕರೆ ಬಂದಿತ್ತು. ನಂತರ ನಮ್ಮ ಠಾಣಾ ವ್ಯಾಪ್ತಿಗೆ ಬಂದಿದ್ದರಿಂದಾಗಿ ನಾವು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದೆವು. ಅಲ್ಲಿ ಶುಭಾ(38) ಎಂಬ ಮಹಿಳೆ ಮನೆ ಮುಂದೆ ಕೊಲೆಯಾಗಿ ಬಿದ್ದಿದ್ದರು ಎಂದು ತಿಳಿಸಿದರು.

ಮೃತ ಮಹಿಳೆ ತನ್ನ ಗಂಡ ಮಹೇಶ್ ಹಾಗೂ ಅತ್ತೆ ಭಾರತಿ ಜೊತೆ ತೋಟದ ಮನೆಯಲ್ಲಿ ವಾಸ ಮಾಡುತ್ತಿದ್ದರು. ಮಧ್ಯಾಹ್ನದ ನಂತರ ಬೆಂಗಳೂರಿನಿಂದ ಬಂದ ಶುಭಾ ಅವರ ಸಹೋದರಿ ಠಾಣೆಗೆ ಒಂದು ದೂರು ಅರ್ಜಿಯನ್ನು ಕೊಟ್ಟಿದ್ದರು. ಅದರಲ್ಲಿ ನಮ್ಮ ಅಕ್ಕನನ್ನು ಅವರ ಗಂಡನೇ ಕೊಲೆ ಮಾಡಿರಬಹುದು, ಅದಕ್ಕೆ ಅವರ ಅತ್ತೆಯೇ ಕುಮ್ಮಕ್ಕು ಕೊಟ್ಟಿರಬಹುದು ಎಂದು ಸಂಶಯ ವ್ಯಕ್ತಪಡಿಸಿ ದೂರನ್ನು ದಾಖಲಿಸಿದ್ದರು.

ಈ ಕುರಿತು ಪೂರ್ವ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆಯನ್ನ ದಾಖಲಿಸಿಕೊಂಡು ತನಿಖೆಯನ್ನು ನಡೆಸಿದೆವು ಎಂದಿದ್ದಾರೆ. ಶವವನ್ನು ಪರೀಕ್ಷೆ ಮಾಡಿದ ನಂತರ ಮೇಲ್ನೋಟಕ್ಕೆ ತಿಳಿದುಬಂದಿರುವುದೇನೆಂದರೆ, ಹೊರಗಿನ ವ್ಯಕ್ತಿ ಬಂದು ಕೊಲೆ ಮಾಡುವ ಸಾಧ್ಯತೆ ಇರಲಿಲ್ಲ.

ಹೀಗಾಗಿ, ನಮಗೆ ಗಂಡನ ಮೇಲೆಯೇ ಅನುಮಾನ ಇತ್ತು. ಅದಕ್ಕೆ ಪೂರಕವಾಗಿ ಆತನ ಮೈ ಮೇಲೆ ಒಂದೆರೆಡು ಹನಿ ರಕ್ತ ಇದ್ದಿದ್ದು ಕಂಡುಬಂದಿತ್ತು. ಹೀಗಾಗಿ, ಆತ ವ್ಯವಸ್ಥಿತವಾಗಿ ಕೊಲೆಗೆ ಸಂಚು ರೂಪಿಸಿರುವುದನ್ನು ತಿಳಿದು ತನಿಖೆಯನ್ನು ಚುರುಕುಗೊಳಿಸಿದೆವು. ನಂತರ ಆತನನ್ನು ವಿಚಾರಣೆಗೊಳಪಡಿಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಹೇಳಿದ್ದಾರೆ.

ಕೊಲೆ ನಡೆದಿರುವುದು ಏಕೆ ? ಅವನಿಗೆ ಹಣಕಾಸಿಗೆ ಅಡಚಣೆ ಇತ್ತು. ಹೀಗಾಗಿ, ಪತ್ನಿ ಶುಭಾಗೆ ತವರು ಮನೆಯಿಂದ ಹಣ ತರುವಂತೆ ಪದೇ ಪದೇ ತೊಂದರೆ ಕೊಡುತ್ತಿದ್ದ ಎಂಬುದು ಕಂಡುಬಂತು. ಶುಭಾ ಅವರು ಎರಡೂವರೆ ತಿಂಗಳ ಗರ್ಭಿಣಿಯಾಗಿದ್ದರು. ಶುಭಾ ಮಗು ಇರಲಿ ಎಂದಿದ್ದರೆ, ಮಹೇಶ್ ಮಗು ಬೇಡ ಎಂದು ಗಲಾಟೆ ತೆಗೆದಿದ್ದ.

ಅಲ್ಲದೇ, ಗರ್ಭಿಣಿಯಾಗಿರುವುದನ್ನು ಇಷ್ಟು ತಡವಾಗಿ ಯಾಕೆ ಹೇಳುತ್ತಿದ್ದಿಯ ಎಂದು ಜಗಳ ಮಾಡಿದ್ದಾನೆ ಹಾಗೂ ಪತ್ನಿ ಗರ್ಭಿಣಿಯಾಗಿರುವ ಬಗ್ಗೆ ಅನುಮಾನ ಇದ್ದುದರಿಂದಾಗಿ ಈ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ ಎಂದು ವಿವರಿಸಿದ್ದಾರೆ.

ಕೊಲೆಗೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಮೃತಳ ಅತ್ತೆಯ ಪಾತ್ರ ಕಂಡುಬರುತ್ತಿಲ್ಲ. ಆದರೆ ಮನೆಯಲ್ಲಿ ಸೊಸೆಯನ್ನು ನಡೆಸಿಕೊಳ್ಳುವ ರೀತಿಯಲ್ಲಿ ವ್ಯತ್ಯಯಗಳು ಇವೆ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದು ಹೇಳಿದ್ದಾರೆ.