ಉ.ಕ ಸುದ್ದಿಜಾಲ ಚಿಕ್ಕೋಡಿ :
ದೇಶಿ ಆಕಳುಗಳಿಗೆ ಹರಡುತ್ತಿರುವ ಚರ್ಮಗoಟು ಕಾಯಿಲೆಯಿಂದ ರೈತರು ಆತಂಕದಲ್ಲಿದ್ದು, ಸರ್ಕಾರ ಆದಷ್ಟು ಬೇಗ ಪರಿಣಾಮಕಾರಿ ಮದ್ದು ಒದಗಿಸಬೇಕೆಂದು ಶಾಸಕ ಗಣೇಶ್ ಹುಕ್ಕೇರಿ ಒತ್ತಾಯಿಸಿದ್ದಾರೆ.
ಚಿಕ್ಕೋಡಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಹುಕ್ಕೇರಿ, ಚಿಕ್ಕೋಡಿ ಸೇರಿದಂತೆ ಸುತ್ತಮುತ್ತಲಿನ ತಾಲೂಕುಗಳಲ್ಲಿನ ದೇಶಿ ಆಕಳುಗಳಲ್ಲಿ ಕಂಡು ಬರುತ್ತಿರುವ ಚರ್ಮಗಂಟು ರೋಗದಿಂದ ರೈತರು ಕಂಗಾಲಾಗಿದ್ದಾರೆ.
ಈಗಾಗಲೇ ರೋಗ ಹರಡದಂತೆ ಮುಂಜಾಗೃತವಾಗಿ ಸರ್ಕಾರದಿಂದ ಲಸಿಕೆ ನೀಡಲಾಗುತ್ತಿದೆ. ಆದ್ರೆ ಅದು ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡದೆ ಇರುವುದರಿಂದ ಚರ್ಮಗಂಟು ರೋಗ ಬಹಳಷ್ಟು ಆಕಳುಗಳಲ್ಲಿ ಕಾಣುತ್ತಿದೆ.
ಜೊತೆಗೆ ಈಗಾಗಲೇ ಚರ್ಮಗಂಟು ರೋಗದಿಂದ ಬಳಲುತ್ತಿರುವ ಆಕಳುಗಳನ್ನು ರಕ್ಷಿಸಲು ಸರ್ಕಾರ ನೀಡುತ್ತಿರುವ ಮದ್ದು ಉಪಯೋಗ ಆಗುತ್ತಿಲ್ಲ ಎಂದು ಶಾಸಕ ಗಣೇಶ್ ಹುಕ್ಕೇರಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಹೆಚ್ಚಿನ ಆಸಕ್ತಿ ವಹಿಸಿ, ಚರ್ಮ ಗಂಟು ರೋಗ ಹೆಚ್ಚು ಆಗದಂತೆ ಕ್ರಮವಹಿಸುವುದರ ಜೊತೆಗೆ, ರೋಗದಿಂದ ಬಳಲುತ್ತಿರುವ ಆಕಳುಗಳಿಗೆ ಸೂಕ್ತ ಔಷಧಿಯನ್ನು ನೀಡಬೇಕೆಂದು ಶಾಸಕ ಗಣೇಶ್ ಹುಕ್ಕೇರಿ ಒತ್ತಾಯಿಸಿದ್ದಾರೆ.
ದೇಶಿ ಆಕಳ ಹಾಲು ಚಿಕ್ಕ ಮಕ್ಕಳ ಆರೋಗ್ಯಕ್ಕೆ ಉತ್ತಮ ಎಂಬ ಭಾವನೆಯಿಂದ ಅನೇಕರು ಉಪಯೋಗಿಸುತ್ತಾರೆ, ಆದ್ರೆ ಈ ರೋಗ ಗಾಳಿಯಲ್ಲಿ ಹರಡುವ ರೋಗ ಆಗಿರುವುದರಿಂದ, ಯಾವ ಆಕಳಲ್ಲಿ ಯಾವಾಗ ರೋಗ ಬರುತ್ತದೆ ಎಂಬುವುದನ್ನು ತಿಳಿದುಕೊಳ್ಳುವುದು ಕಷ್ಟಕರವಾಗಿದೆ.
ನಾಳೆ ಜನಸಾಮನ್ಯರ ಆರೋಗ್ಯದ ಮೇಲೆ ಪರಿಣಾಮ ಆಗುವಂತ ಸಾಧ್ಯತೆ ಇದೆ, ಸರ್ಕಾರ ಆದಷ್ಟು ಬೇಗ ಎಚ್ಚೆತ್ತುಕೊಳ್ಳಬೇಕೆಂದು ಶಾಸಕ ಗಣೇಶ್ ಹುಕ್ಕೇರಿ ತಿಳಿಸಿದ್ದಾರೆ.