ಮೈಸೂರ
ಮೊದಲ ಬಾರಿಗೆ ನಾಡ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ಗಿಟ್ಟಿಸಿಕೊಂಡ ಪೋರ ಭವಿಷ್ಯದ ಗಜಪಡೆ ನಾಯಕನನ್ನಾಗಿಸಲು ತರಬೇತಿಗೆ ಅರಣ್ಯ ಇಲಾಖೆ ಕ್ರಮ
ಹಾಸನ ಹಾಗೂ ಸಕಲೇಶಪುರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪುಂಡಾಟ ಮೆರೆದು ಸೆರೆ ಸಿಕ್ಕ ನಾಲ್ಕೇ ವರ್ಷದಲ್ಲಿ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯುವ ಮೂಲಕ ‘ಅಶ್ವಥಾಮ’ ಎಲ್ಲರ ಗಮನ ಸೆಳೆದಿದ್ದಾನೆ. ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಅಶ್ವತ್ಥಾಮ ಈಗ ಭವಿಷ್ಯದ ಗಜಪಡೆ ನಾಯಕ ಅಂತ ಹೇಳಲಾಗ್ತಿದೆ.
ಹಾಸನ ಜಿಲ್ಲೆಯ ಹಲವೆಡೆ, ಸಕಲೇಶಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪದೆ ಪದೇ ಕಾಣಿಸಿಕೊಂಡು ಜನರಲ್ಲಿ ಆತಂಕವನ್ನುಂಟು ಮಾಡಿದ್ದ ಕಾಡಾನೆ ಸೆರೆ ಸ್ಥಳೀಯರಿಂದ ಒತ್ತಡ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ೨೦೧೭ರಲ್ಲಿ ಕಾಡಾನೆ ಸೆರೆಗೆ ಕಾರ್ಯಾಚರಣೆ ಆರಂಭಿಸಿತ್ತು. ಜುಲೈ ತಿಂಗಳಲ್ಲಿ ಸಕಲೇಶಪುರ ವಿಭಾಗದಲ್ಲಿ ಕಾರ್ಯಾಚರಣೆ ನಡೆಸಿ ಉಪಟಳ ನೀಡುತ್ತಿದ್ದ ಆನೆಯ ಜಾಡು ಹಿಡಿದು ಪರಿಶೀಲಿಸಿದಾಗ ಗಂಡಾನೆಯೊಂದು ಗ್ರಾಮಗಳ ಬಳಿ ಸುಳಿದಾಡುತ್ತಿದ್ದದ್ದು ಪತ್ತೆಯಾಗಿತ್ತು. ಉಪಟಳ ನೀಡುತ್ತಿದ್ದ ಆನೆ ಅದೇ ಎಂದು ಗುರುತಿಸಿದ ಅರಣ್ಯ ಸಿಬ್ಬಂದಿಗಳ ತಂಡ ದಸರಾ ಆನೆಗಳಾದ ಅಭಿಮನ್ಯು, ಅರ್ಜುನ ಸೇರಿದಂತೆ ಇನ್ನಿತರ ಆನೆಗಳ ಬಳಸಿಕೊಂಡು ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿತ್ತು.
ಪುಂಡಾಟಿಕೆಯಿಂದಾಗಿಯೇ ಸೆರೆ ಸಿಕ್ಕ ೩೦ ವರ್ಷದ ಗಂಡಾನೆಯನ್ನು ದೊಡ್ಡಹರವೆ ಆನೆ ಕ್ಯಾಂಪ್‌ಗೆ ಕೊಂಡೊಯ್ದು ತರಬೇತಿ ನೀಡಲಾಗಿತ್ತು. ಕ್ರಾಲ್‌ನಲ್ಲಿಟ್ಟು ತರಬೇತಿ ನೀಡಿದ್ದ ಬಳಿಕ ಆ ಆನೆಗೆ ‘ಅಶ್ವಥಾಮ ಎಂದು ನಾಮಕರಣ ಮಾಡಲಾಗಿತ್ತು. ತರಬೇತಿ ವೇಳೆ ಮಾವುತ, ಕಾವಾಡಿಗಳ ಮಾತು ಕೇಳುವ ಮೂಲಕ ಕಾಡಾನೆಗಿದ್ದ ಉಗ್ರ ಸ್ವಭಾವ ಕಳೆದುಕೊಂಡು ಸೌಮ್ಯ ಸ್ವರೂಪಿಯಾಗಿ ಮಾರ್ಪಾಡಾಗಿತ್ತು. ಸೆರೆ ಸಿಕ್ಕ ಒಂದು ವರ್ಷದಲ್ಲೇ ಕ್ರಾಲ್‌ನಿಂದ ಹೊರ ಬಂದಿದ್ದ ಅಶ್ವಥಾಮನನ್ನು ಆನೆ ಶಿಬಿರದ ಸುತ್ತಮುತ್ತ ಬಿಟ್ಟು ಪಳಗಿಸಲಾಗಿತ್ತು. ಆ ಶಿಬಿರದ ಏಕೈಕ ಗಂಡಾನೆಯಾಗಿದ್ದ ಅಶ್ವಥಾಮ, ಹೆಣ್ಣಾನೆಗಳಾದ ಲಕ್ಷ್ಮೀ, ಕುಮಾರಿ, ರೂಪ, ಅನಸೂಯ ಆನೆಗಳೊಂದಿಗೆ ನೆಲೆಸಿದ್ದಾನೆ.
ಪ್ರಸ್ತುತ ೩೪ ವರ್ಷದ ಅಶ್ವಥಾಮ ೨.೮೫ ಮೀಟರ್ ಎತ್ತರ, ೩.೪೬ ಮೀಟರ್ ಶರೀರದ ಉದ್ದ ಹೊಂದಿದ್ದು, ೩೬೩೦ ಕೆಜಿ ತೂಕವಿದ್ದಾನೆ. ಸಮತಟ್ಟಾದ ಬೆನ್ನು ಹೊಂದಿರುವ ಈ ಗಂಡಾನೆ ಭವಿಷ್ಯದ ಅಂಬಾರಿ ಆನೆಯಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣ ಹೊಂದಿದ್ದಾನೆ. ಈ ಹಿನ್ನೆಲೆಯಲ್ಲಿ ಮುಂದಿನ ೫-೮ ವರ್ಷ ದಸರಾ ಮಹೋತ್ಸವದಲ್ಲಿ ಕರೆತಂದು ತರಬೇತಿ ನೀಡಿದರೆ, ೧೫ ವರ್ಷದ ನಂತರ ಅಂಬಾರಿ ಹೊರಲು ಅಶ್ವಥಾಮನನ್ನು ಸಜ್ಜುಗೊಳಿಸಬಹುದು ಎಂಬ ಲೆಕ್ಕಾಚಾರ ಅರಣ್ಯ ಇಲಾಖೆಯದ್ದಾಗಿದೆ. ಈ ಹಿನ್ನೆಲೆಯಲ್ಲಿ ಸೆರೆ ಸಿಕ್ಕ ೪ ನಾಲ್ಕು ವರ್ಷದಲ್ಲೇ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿರುವ ಭವಿಷ್ಯದ ದಸರಾ ಆನೆಯಾಗಿ ಮಹತ್ತರ ಜವಾಬ್ದಾರಿ ವಹಿಸಿಕೊಳ್ಳುವ ಮುನ್ಸೂಚನೆ ನೀಡಿದಂತಿದೆ. ದಂತವೂ ನೀಳವಾಗಿರುವುದು ಆನೆಯ ಲಕ್ಷಣ ಹೆಚ್ಚಲು ಕಾರಣವಾಗಿದೆ. ಅಶ್ವಥಾಮನಿಗೆ ಮಾವುತನಾಗಿ ಶಿವು, ಕಾವಾಡಿಯಾಗಿ ಗಣೇಶ ಕರ್ತವ್ಯ ನಿರ್ವಹಿಸುತ್ತಿದ್ದು, ಆನೆಯನ್ನು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ.
ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಯ್ಕೆಯಾದ ಹಿನ್ನೆಲೆಯಲ್ಲಿ ದೊಡ್ಡಹರವೆ ಶಿಬಿರದಿಂದ ಅಶ್ವಥಾಮನನ್ನು ಮತ್ತಿಗೂಡು ಆನೆ ಶಿಬಿರಕ್ಕೆ ಎರಡು ದಿನದ ಹಿಂದೆಯೇ ಕರೆಸಿಕೊಳ್ಳಲಾಗಿದೆ. ಈಗಾಗಲೇ ಜಂಬೂಸವಾರಿಗೆ ಆಯ್ಕೆಯಾದ ಎಲ್ಲಾ ೮ ಆನೆಗಳಿಗೂ ಕ್ಯಾಂಪ್‌ಗಳಲ್ಲೇ ಪೌಷ್ಠಿಕ ಆಹಾರ ನೀಡುವ ಮೂಲಕ ತಯಾರಿ ಆರಂಭಿಸಲಾಗಿದೆ. ಸೆ.೧೩ರಂದು ಗಜಪಯಣಕ್ಕೆ ಚಾಲನೆ ನೀಡುತ್ತಿದ್ದಂತೆ ವಿವಿಧ ಕ್ಯಾಂಪ್‌ಗಳಲ್ಲಿರುವ ಎಲ್ಲಾ ೮ ಆನೆಗಳು ಒಂದೇ ತಂಡದಲ್ಲಿ ಮೈಸೂರಿನತ್ತ ಆಗಮಿಸಲಿವೆ.