ಉ.ಕ ಸುದ್ದಿಜಾಲ ದಕ್ಷಿಣ ಕನ್ನಡ :

ಬರಹ : ನಿರಂಜನ್ ಜೈನ್ ಕುದ್ಯಾಡಿ

ಅದು ತುಳುವ ನಾಡು. ಜೈನ ಅರಸರ ಅರಸೊತ್ತಿಗೆಯ ವೈಭವದ ಬೀಡು. ವೇಣೂರಿನಲ್ಲಿ ಭಗವಾನ್ ಬಾಹುಬಲಿ ಮೂರ್ತಿಯ ಪ್ರತಿಷ್ಠಾಪಕರಾದ ಅಜಿಲರಸರ ಸೀಮೆಯ ಪ್ರದೇಶ. ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಪ್ರದೇಶ. ಹಲವು ಬೇಟೆಗಾರರು ಶರವೇಗದಲ್ಲಿ ಓಡುತ್ತಿದ್ದ ಹಂದಿಯನ್ನು ಬೆನ್ನಟ್ಟುತ್ತಿದ್ದರು. ಹಂದಿಗೆ ಅದಾಗಲೇ ಒಂದು ಬಾಣ ನೆಟ್ಟಿತ್ತು. ರಕ್ತಸಿಕ್ತವಾಗಿದ್ದ ಹಂದಿ ತನ್ನ ಪ್ರಾಣ ಉಳಿಸಿಕೊಳ್ಳಲು ದಿಕ್ಕು ಕಾಣದೇ ಓಡುತ್ತಿತ್ತು. ತನ್ನ ಪ್ರಾಣ ಉಳಿಯಬೇಕಾದರೆ ತಾನು ಸುರಕ್ಷಿತ‌ ಸ್ಥಳವನ್ನು ಆಯ್ಕೆ ಮಾಡಬೇಕೆಂದು ಅಲೋಚಿಸಿತು.‌ ಆ ಗ್ರಾಮದ ಏಕೈಕ ಪೂಜಾಲಯವಾಗಿದ್ದ ಜೈನ ಧರ್ಮೀಯರ ಬಸದಿ ಇರುವ ಪ್ರದೇಶದತ್ತ ಹಂದಿ ಓಡಿತು.

ಜೈನರ ಶೃದ್ಧಾಕೇಂದ್ರಗಳು ಸಂಪೂರ್ಣ ಅಹಿಂಸಾಮಯವಾಗಿರುತ್ತದೆ ಹಾಗೂ ಪ್ರಶಾಂತವಾಗಿರುತ್ತದೆ. ಅಂತೆಯೇ ಹಂದಿ ಬಸದಿಯತ್ತ ಧಾವಿಸಿತು. ಬೇಟೆಗಾರರೂ‌ ಬಸದಿಯತ್ತ ಓಡಿದರು. ದೂರದಿಂದಲೇ ಬರುವಾಗ ಬೇಟೆಗಾರರಿಗೆ ಬಸದಿಗೆ ಬೆಂಕಿ ಬಿದ್ದಂತೆ ಗೋಚರಿಸಿತು. ಹಂದಿಯೂ ಬಸದಿಯ ಸಮೀಪವೇ ನಿಂತಿತ್ತು. ಹಂದಿ ಮತ್ತೆ ಸಿಗಬಹುದೆಂದು ಬೇಟೆಗಾರರರು ಬೆಂಕಿ ನಂದಿಸಲು ಬಸದಿಯತ್ತ ಧಾವಿಸಿದರು. ಆದರೆ ಅಲ್ಲಿ ಅವರಿಗೆ ಆಶ್ಚರ್ಯವೊಂದು ಕಾದಿತ್ತು.

ಆ ಭವ್ಯ ಜಿನಾಲಯ ಯಾವುದೇ ತೊಡಕಿಲ್ಲದೇ ಅಹಿಂಸಾ ಸಂದೇಶವನ್ನು ದಶ ದಿಕ್ಕುಗಳಿಗೂ ಪಸರಿಸಿ ಕಂಗೊಳಿಸುತ್ತಿತ್ತು. ಅಗಾಧವಾಗಿ ಕಾಣುತ್ತಿದ್ದ ಬೆಂಕಿ ರಾಶಿ ಏನಾಯಿತು ಎಂದು ಆಶ್ಚರ್ಯಪಟ್ಟರು. ಅದೇ ಆಶ್ಚರ್ಯದಿಂದ ಬಸದಿಯ ಹೊರಗಡೆ ಬಂದು ಹಂದಿಯತ್ತ ಧಾವಿಸಿದರು. ಆದರೆ ಹಂದಿ ನಿಂತುಕೊಂಡೇ ಇತ್ತು. ಕುಶಿಯಿಂದ ಹಂದಿಯತ್ತ ಧಾವಿಸಿದರು. ಆದರೆ ಬೇಟೆಗಾರರಿಗೆ ಇಲ್ಲೂ ಪರಮಾಶ್ಚರ್ಯವೊಂದು ಕಾದಿತ್ತು. ಹತ್ತಿರ ಹೋದರೂ ಹಂದಿ ಮಿಸುಕಾಡದೇ ಇರುವಾಗ ಸಂದೇಹವುಂಟಾಯಿತು. ಹತ್ತಿರ ಹೋಗಿ ನೋಡಲಾಗಿ ಬೇಟೆಯಾಡಿದ್ದ ಹಂದಿ ಕಲ್ಲಿನ ರೂಪವನ್ನು ತಾಳಿತ್ತು. ಇದೀಗ ಬೇಟೆಗಾರರು ಸಂಪೂರ್ಣವಾಗಿ ಕಕ್ಕಾಬಿಕ್ಕಿಯಾದರು.

ಒಂದು ಕಡೆ ಬಸದಿಗೆ ಬೆಂಕಿ ಬಿದ್ದಂತೆ ತೋರಿದ್ದು , ಆದರೆ ಹತ್ತಿರ ಹೋಗಿ ನೋಡುವಾಗ ಬೆಂಕಿ ಮಾಯವಾಗಿತ್ತು. ಬೇಟೆಯಾಡಿದ್ದ ಹಂದಿ ಕಲ್ಲಿನ ರೂಪವನ್ನು ತಾಳಿದ್ದು. ಇದು ಆದಿನಾಥ ಭಗವಂತನನ್ನು ಪೂಜಿಸಲ್ಪಡುವ ಬಸದಿಯಿರುವ ಪ್ರದೇಶ. ಇದು ಅಹಿಂಸಾಮಯ ಕ್ಷೇತ್ರವಾಗಿದೆ. ಸಕಲ ಚರಾಚರ ಜೀವಿಗಳನ್ನು  ಬದುಕು, ಬದುಕಲು ಬಿಡು ಎನ್ನುವ  ಮಹಾಮಹಿಮ ಪುಣ್ಯಮಯ ಕ್ಷೇತ್ರವಾಗಿದೆ.

ಇನ್ನು ನಮಗೆ ಜಿನೇಶ್ವರನೇ ಅಭಯದಾತನು ರಕ್ಷಕನು ಎಂದು ಜಿನೇಶ್ವರನ‌ ಪದತಲವನ್ನು ಮೊರೆಹೊಕ್ಕರು. ಅಂದಿನಿಂದ ಬೇಟೆಗಾರರೂ ಕೂಡ ಸಾತ್ವಿಕ ಬದುಕನ್ನು ನಡೆಸುತ್ತಾ ಭಗವಂತನ ಪೂಜೆ ಪುನಸ್ಕಾರಗಳಿಗೆ ಶಿರಬಾಗುತ್ತ ಭಗವಂತನ ಭಕ್ತರಾದರು. ಹಂದಿ ( ತುಳುವಿನಲ್ಲಿ ಪಂಜಿ ) ಕಲ್ಲಿನ ರೂಪ ತಾಳಿದ್ದರಿಂದ #ಪಂಜಿಕಲ್ಲು ( ಹಂದಿಕಲ್ಲು ) ಎಂದು ಹೆಸರಾಗಿ ಅತಿಶಯ ಕ್ಷೇತ್ರವಾಗಿ ವೈಭವದಿಂದ ಭಕ್ತ ಜನರ ಶೃದ್ಧಾಕೇಂದ್ರವಾಗಿ ಆರಾಧನೆಗೊಳ್ಳುತ್ತಾ ಬರುತ್ತಿದೆ.

ಸಂಪೂರ್ಣ ಶಿಲಾಮಯ ಬಸದಿ

600 ವರ್ಷಗಳ ಇತಿಹಾಸವಿರುವ ಈ ಬಸದಿ ಕಾರ್ಕಳ ಜೈನ ಮಠದ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಇದೀಗ ಬಸದಿಯನ್ನು ಸಂಪೂರ್ಣವಾಗಿ ಶಿಲಾಮಯಗೊಳಿಸಲಾಗಿದೆ. ಪೂಜ್ಯ ಮುನಿಗಳ ಆಶೀರ್ವಚನ ಹಾಗೂ ಪೂಜ್ಯ ಭಟ್ಟಾರಕರ ಆಶೀರ್ವಚನ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳ ಪ್ರೋತ್ಸಾಹದೊಂದಿಗೆ ಪಂಜಿಕಲ್ಲು ಆದಿನಾಥ ಬಸದಿ ಸರ್ವಾಂಗ ಸುಂದರವಾಗಿ ಕಂಗೊಳಿಸುತ್ತಿದೆ. ಪಂಜಿಕಲ್ಲು ಸುದರ್ಶನ್ ಜೈನ್ ಬಂಟ್ವಾಳ ಇವರ ಅಧ್ಯಕ್ಷತೆಯ ಜೀರ್ಣೋದ್ಧಾರ ಸಮಿತಿಯ‌ ಅವಿರತ ಪ್ರಯತ್ನದಿಂದಾಗಿ ಶಿಲಾಮಯ ಬಸದಿ ಪಂಚಕಲ್ಯಾಣಕ್ಕೆ ಮೈದಳೆದು ನಿಂತಿದೆ. 03 – 02 – 2022 ಗುರುವಾರದಿಂದ 07 – 02 – 2022 ಸೋಮವಾರದವರೆಗೆ ವೈಭವೋಪೇತವಾಗಿ ಪಂಚಕಲ್ಯಾಣ ನಡೆಯಲಿದೆ.

ಪಂಜಿಕಲ್ಲು ಬಸದಿಗೆ ಧನ ಸಹಾಯ ಮಾಡಬಹುದು.
CANARA BANK ( SORNAD )
Account No – 5267101005393
IFSC – CNRB0005267
Bantwala Taluk , Dakshina Kannada Dist.
KARNATAKA

ಮಾಹಿತಿಗಾಗಿ ಸಂಪರ್ಕಿಸಿ
9449822775