ಉ.ಕ ಸುದ್ದಿಜಾಲ ಮೈಸೂರು :

ನಿನ್ನೆ ಅಮಾವಾಸ್ಯೆ ದಿನ ಪತಿ ಮನೆ ಮುಂದೆ ಹೆಂಡತಿ ಮಾಟ ಮಂತ್ರ ಮಾಡಿಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದ್ದು ಮಹಿಳೆಯನ್ನು ಸಾರ್ವಜನಿಕರು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

ಮೈಸೂರಿನ ನಾಚನಹಳ್ಳಿ ಪಾಳ್ಯದ 8ನೇ ಕ್ರಾಸ್‌ನಲ್ಲಿ ಸಮ್ರೀನ್ ಎಂಬ ಮಹಿಳೆ ತನ್ನ ಪತಿ ರಫಿ ಮನೆ ಮುಂದೆ ಮಾಟ ಮಾಡಿಸಿದ್ದಾಳೆ. ಪತಿಯ ಮನೆ ಮುಂದೆ ಮಡಿಕೆ, ನಿಂಬೆಹಣ್ಣು, ಮೆಣಸಿನಕಾಯಿ, ಉಪ್ಪು ಸೇರಿ ಹಲವು ವಸ್ತುಗಳನ್ನು ಹಾಕಲು ಬಂದಿದ್ದಾಗ ಸಾರ್ವಜನಿಕರು ಮಹಿಳೆಯನ್ನು ಹಿಡಿದಿದ್ದಾರೆ.

ಕೆಲವು ದಿನಗಳಿಂದ ಪತಿಯಿಂದ ದೂರವಾಗಿದ್ದ ಸಮ್ರೀನ್, ಪ್ರತಿ ಅಮಾವಾಸ್ಯೆ ದಿನ ರಫೀ ಮನೆ ಮುಂದೆ ಮಾಟ ಮಂತ್ರ ಮಾಡಿಸುತ್ತಿದ್ದಳಂತೆ. ಪ್ರತಿ ಅಮಾವಾಸ್ಯೆಯಂದು ರಫಿ ಮನೆ ಮುಂದೆ ಮಾಟ ಮಂತ್ರದ ವಸ್ತುಗಳು ಬಿದ್ದಿರುತ್ತಿದ್ದವು.

ನಿನ್ನೆ (ಮಾರ್ಚ್ 21) ರಾತ್ರಿ ಮಾಟ ಮಂತ್ರದ ವಸ್ತುಗಳನ್ನು ಹಾಕುವಾಗ ರೆಡ್ ಹ್ಯಾಂಡ್ ಆಗಿ ಸಮ್ರೀನ್‌ಳನ್ನು ಹಿಡಿದಿದ್ದಾರೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಅಮಾವಾಸ್ಯೆಯ ರಾತ್ರಿಗಳನ್ನು ತಂತ್ರ-ಮಂತ್ರಗಳ ಸಿದ್ಧಿಗಾಗಿ ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ಅಮವಾಸ್ಯೆಯ ರಾತ್ರಿಯಂದು ಅನೇಕರು ಮಾಟ ಮಂತ್ರಗಳನ್ನು ಮಾಡಿಸುತ್ತಾರೆ.

ಈ ದಿನಗಳಲ್ಲಿ ತಾಂತ್ರಿಕರು ಮತ್ತು ಅಘೋರಿಗಳು ಅಮವಾಸ್ಯೆಯ ರಾತ್ರಿ ತಮ್ಮ ಶಕ್ತಿಯನ್ನು ಸಾಧಿಸುತ್ತಾರೆ ಎನ್ನಲಾಗುತ್ತದೆ.