ಉ.ಕ‌ ಸುದ್ದಿಜಾಲ ರಾಯಬಾಗ :

ಕಳೆದ ಮೂರು ದಶಕಗಳಿಂದ ಚಿಕ್ಕೋಡಿ ಜಿಲ್ಲೆಯಾಗಬೇಕೆಂದು ಹೋರಾಟಗಳು ನಡೆಯುತ್ತಲೇ ಇವೆ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಿಧಾನಸಭಾ ಚುನಾವಣೆಯ ಪ್ರಚಾರ ಸಂದರ್ಭದಲ್ಲೂ ಕೂಡಾ ಚಿಕ್ಕೋಡಿ ಜಿಲ್ಲೆ ಮಾಡತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಆದರೆ, ಈವರೆಗೂ ಜಿಲ್ಲೆ ಮಾತ್ರ ಆಗಿಲ್ಲ.

ಈಗ ಮತ್ತೆ ಚಿಕ್ಕೋಡಿ ಜಿಲ್ಲೆ ಆಗಬೇಕೆಂದು ಒತ್ತಾಯಿಸಿ ಹೋರಾಟಗಾರರು ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ.ಬಬೆಳಗಾವಿಯಲ್ಲಿ ಅಧಿವೇಶನ ಸಮೀಪಿಸುತ್ತಿದ್ದಂತೆ ಪ್ರತ್ಯೇಕ ಚಿಕ್ಕೋಡಿ ಜಿಲ್ಲಾ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.

ಪ್ರತ್ಯೇಕ ಚಿಕ್ಕೋಡಿ ಜಿಲ್ಲೆ ರಚನೆಗೆ ಒತ್ತಾಯಿಸಿ ರಾಯಬಾಗ ಪಟ್ಟಣದಲ್ಲಿರುವ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟಗಾರರ ಸಮಿತಿಯವರು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಪ್ರತ್ಯೇಕ ಚಿಕ್ಕೋಡಿ ಜಿಲ್ಲೆಗೆ ಆಗ್ರಹಿಸಿದರು.

ಅಧಿವೇಶನದ ವೇಳೆ ನಾವು ನಿರಂತರವಾಗಿ ಹೋರಾಟ ಮಾಡುತ್ತೇವೆ. ಜಿಲ್ಲಾ ರಚನೆಯಾಗುವವರೆಗೆ ಹೋರಾಟ ಕೈ ಬಿಡುವುದಿಲ್ಲ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟಗಾರರ ಸಮಿತಿಯ ಅಧ್ಯಕ್ಷ ಸಂಜು ಬಡಿಗೇರ ಹೇಳಿದರು.

ಚಂದ್ರಕಾಂತ ಹುಕ್ಕೇರಿ, ತ್ಯಾಗರಾಜ ಕದಂ, ರಾಕೇಶ ಅವಳೆ,ರವಿ ನಾಯಿಕ, ಸಂಜಯ ಪಾಟೀಲ, ಸಚಿನ ದೊಡಮನಿ, ಮುಬಾರಕ್ ಡೊಂಗ್ರೆ, ಪ್ರಕಾಶ ಬೇಡರ, ಸತೀಶ ಚಿಂಗಳೆ, ಅದ್ನಾನ್ ಶೇಖ ಉಪಸ್ಥಿತಿಯಲ್ಲಿ ಪತ್ರಿಕಾಗೋಷ್ಠಿ ನಡೆಯಿತು.