ಉ.ಕ ಸುದ್ದಿಜಾಲ ಅಥಣಿ :
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಾಳಿಗೇರಿ ಗ್ರಾಮದ ಹೊರವಲಯದಲ್ಲಿ ಕಾಡು ಹಂದಿ ಬೇಟೆಯಾಡುತ್ತಿದ್ದ ಇಬ್ಬರನ್ನು ಬೆಳಗಾವಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದವರು ಭಾನುವಾರ ಬಂಧಿಸಿದ್ದಾರೆ.
ಮೂರು ಜೀವಂತ ಕಾಡುಹಂದಿ, ಹಗ್ಗ ಹಾಗೂ ವಿವಿಧ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ. ರಡೇರಹಟ್ಟಿ ಗ್ರಾಮದ ಸದಾಶಿವ ಬಸವಂತ ಕಾಂಬಳೆ (27), ಅಥಣಿ ಗವಿಸಿದ್ದನಮಡ್ಡಿಯ ನಿವಾಸಿ ಶಿವಾಜಿ ಅಶೋಕ ಭಜಂತ್ರಿ (35) ಬಂಧಿತ ಆರೋಪಿಗಳು.
ಕಾಡುಹಂದಿ ಮಾಂಸವನ್ನು ಅಥಣಿ, ಜಮಖಂಡಿ ಸೇರಿ ಮಹಾರಾಷ್ಟ್ರದ ಮಿರಜ, ಸಾಂಗಲಿ ನಗರಗಳಲ್ಲಿ ಮಾರಾಟ ಮಾಡುತ್ತಿದ್ದರು. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್‌ಐ ರೋಹಿಣಿ ಪಾಟೀಲ, ಸಿಬ್ಬಂದಿ ಶಿವಾನಂದ ಅರಬೆಂಚಿ, ಮಾರುತಿ ನಾಯಕ, ಕೆ.ಬಿ.ಕಂಠಿ, ಎನ್.ಎಸ್.ನಾಯಕ, ಎಸ್.ಎಸ್.ರೆಡ್ಡಿ ಹಾಗೂ ಉಮೇಶ ಪಟ್ಟೆದ ಕಾರ್ಯಾಚರಣೆಯಲ್ಲಿದ್ದರು.