ಉ.ಕ ಸುದ್ದಿಜಾಲ ಸವದತ್ತಿ :

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಕೂಲಿ ಕಾರ್ಮಿಕರ ಪ್ರಾಮಾಣಿಕತೆಗೆ ಅತ್ಯುತ್ತಮ ಉದಾಹರಣೆಯೊಂದು ಸಿಕ್ಕಿದೆ. ಗ್ರಾಮದ ಬಿಸಿಎಂ ಹಾಸ್ಟೆಲ್ ಸಮೀಪ ಕೆಲಸ ಮಾಡುತ್ತಿದ್ದ ವೇಳೆ ಮಣ್ಣಿನ ಕುಡಕೆಯೊಂದರಲ್ಲಿ ಹಳೆಯ ಕಾಲದ ಅಪರೂಪದ 14 ಚಿನ್ನದ ನಾಣ್ಯಗಳು ಪತ್ತೆಯಾಗಿದ್ದು, ಕಾರ್ಮಿಕರು ತಕ್ಷಣವೇ ಅದನ್ನು ತಾಲೂಕಾಡಳಿತಕ್ಕೆ ಒಪ್ಪಿಸಿ ಪ್ರಾಮಾಣಿಕತೆ ಮೆರೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸವದತ್ತಿ ತಾಲೂಕಿನ ಇಂಚಲ ಗ್ರಾಮದ ಬಿಸಿಎಂ ಹಾಸ್ಟೆಲ್ ಹತ್ತಿರ ವಿಬಿಜಿ ರಾಮ್ ಕಾಮಗಾರಿ ನಡೆಸುತ್ತಿದ್ದ ವೇಳೆ, ಮಣ್ಣಿನಲ್ಲಿ ಹೂತುಹೋಗಿದ್ದ ಮಣ್ಣಿನ ಕುಡಿಕೆಯೊಂದು ಕೂಲಿ ಕಾರ್ಮಿಕರಿಗೆ ಸಿಕ್ಕಿತ್ತು.ಅದನ್ನು ತೆರೆದು ನೋಡಿದಾಗ ಅದರೊಳಗೆ ಹೊಳೆಯುವ ಚಿನ್ನದ ನಾಣ್ಯಗಳು ಕಂಡುಬಂದಿದ್ದವು.

ಒಟ್ಟು 54.8 ಗ್ರಾಂ ತೂಕವಿರುವ ಈ 14 ಚಿನ್ನದ ನಾಣ್ಯಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು 8.27 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇನ್ನೂ ಚಿನ್ನದ ನಾಣ್ಯ ತುಂಬಿದ್ದ ಮಡಿಕೆ ಸಿಕ್ಕ ತಕ್ಷಣವೇ ಆಸ್ತಿಯ ಆಸೆಗೆ ಬೀಳದ ಕಾರ್ಮಿಕರು ನೇರವಾಗಿ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪಿಡಿಒ ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು. ನಂತರ ಕೂಲಿ ಕಾರ್ಮಿಕರು ಅಧಿಕಾರಿಗಳ ಸಮ್ಮುಖದಲ್ಲೇ ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರಿಗೆ ನಾಣ್ಯಗಳನ್ನು ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ. ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರು ಈ ಎಲ್ಲ 14 ಚಿನ್ನದ ನಾಣ್ಯಗಳನ್ನು ಸರ್ಕಾರಿ ಖಜಾನೆಗೆ ಸಾಂಪ್ರದಾಯಿಕ ನಿಯಮಾವಳಿಗಳಂತೆ ಸಲ್ಲಿಸಿದ್ದಾರೆ.

ವಿಶೇಷವೆಂದರೆ, ಪತ್ತೆಯಾಗಿರುವ ಈ 14 ಚಿನ್ನದ ನಾಣ್ಯಗಳ ಮೇಲೆ ಆನೆಯ ಚಿತ್ರ ಸ್ಪಷ್ಟವಾಗಿ ಕೆತ್ತಲ್ಪಟ್ಟಿದೆ. ಇತಿಹಾಸದ ಪ್ರಕಾರ ತಲಕಾಡಿನ ಗಂಗರ ರಾಜಲಾಂಛನ ಆನೆಯಾಗಿತ್ತು. ಹೀಗಾಗಿ ಈ ನಾಣ್ಯಗಳು ಕ್ರಿ.ಶ 10 ರಿಂದ 15 ನೇ ಶತಮಾನದ ಅವಧಿಯ ಅತ್ಯಂತ ಪ್ರಾಚೀನ ನಾಣ್ಯಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಅಪಾರ ಮೌಲ್ಯದ ಐತಿಹಾಸಿಕ ಸಂಪತ್ತು ಸಿಕ್ಕರೂ ಪ್ರಾಮಾಣಿಕತೆ ಮೆರೆದು ಸರ್ಕಾರಕ್ಕೆ ಒಪ್ಪಿಸಿದ ಕೂಲಿ ಕಾರ್ಮಿಕರ ಕಾರ್ಯವನ್ನು ಸವದತ್ತಿ ತಾಲೂಕಾಡಳಿತ ಮತ್ತು ಗ್ರಾಮಸ್ಥರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.