ಉ.ಕ ಸುದ್ದಿಜಾಲ ಜೈನೂರ್ (ತೆಲಂಗಾಣ) : 

ಯುವಕನೊಬ್ಬ ಒಂದೇ ಮಂಟಪದಲ್ಲಿ ಇಬ್ಬರು ಯುವತಿಯರಿಗೆ ತಾಳಿ ಕಟ್ಟುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಈ ಘಟನೆ ತೆಲಂಗಾಣದ ಕುಮುರಂಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.

ಜೈನೂರ್ ಮಂಡಲದ ಅಡ್ಡೇಸರ ಗ್ರಾಮದ ರಂಭಾ ಬಾಯಿ ಮತ್ತು ಬದ್ರುಶವ್ ಅವರ ಎರಡನೇ ಪುತ್ರ, ವರ ಛತ್ರುಶವ್ ಎಂಬಾತನೇ ಇಬ್ಬರು ಯುವತಿಯರಿಗೆ ತಾಳಿ ಕಟ್ಟಿದ ಭೂಪ!


ಜೈನೂರ್ ಮಂಡಲದ ಪೂನಗುಡದ ಜಂಗುಬಾಯಿ ಮತ್ತು ಆದಿಲಾಬಾದ್ ಜಿಲ್ಲೆ ಗಾಡಿಗುಡ ಮಂಡಲದ ಸಾಂಗ್ವಿ ಗ್ರಾಮದ ಸೋಮದೇವಿ ಎಂಬ ಇಬ್ಬರು ಯುವತಿಯರನ್ನು ಯುವಕ ಛತ್ರುಶವ್ ಒಂದೇ ಮಂಟಪದಲ್ಲಿ ಏಕಕಾಲದಲ್ಲಿ ವಿವಾಹವಾಗುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾನೆ.

ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ, ದಂಪತಿಗಳು ಗುರುವಾರ ಬುಡಕಟ್ಟು ಸಂಪ್ರದಾಯಗಳ ಪ್ರಕಾರ ಅದ್ಧೂರಿ ಸಮಾರಂಭದಲ್ಲಿ ವಿವಾಹವಾದರು. ಪೋಷಕರು ಮತ್ತು ಗ್ರಾಮಸ್ಥರು ದಂಪತಿಗಳಿಗೆ ಆಶೀರ್ವಾದ ಕೂಡ ಮಾಡಿದರು.

ಫ್ಲೆಕ್ಸ್ ಹಾಗೂ ಬಟ್ಟಿಂಗ್ಸ್ : 
ಮದುವೆಯ ಆಮಂತ್ರಣ ಪತ್ರಿಕೆ ಸೇರಿದಂತೆ ಫ್ಲೆಕ್ಸ್ ಹಾಗೂ ಬಟ್ಟಿಂಗ್ಸ್ನಲ್ಲೂ ಇಬ್ಬರು ಯುವತಿಯರ ಹೆಸರನ್ನು ಮುದ್ರಿಸಲಾಗಿಯತ್ತು ಅನ್ನೋದು ಮತ್ತೊಂದು ವಿಶೇಷ. ಬುಡಕಟ್ಟು ಸಂಪ್ರದಾಯ ಪ್ರಕಾರ ನಡೆದ ಈ ಅದ್ಧೂರಿ ವಿವಾಹ ಸಮಾರಂಭದಲ್ಲಿ ಸಂಬಂಧಿಕರು, ಸ್ಥಳೀಯರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಓರ್ವಳ ಕುತ್ತಿಗೆಗೆ ಮೂರು ಗಂಟು, ಮತ್ತೋರ್ವಳ ಕುತ್ತಿಗೆಗೆ ಮೂರು ಗಂಟು ಹಾಕಿದ ವರ ಛತ್ರುಶವ್, ಇಬ್ಬರನ್ನು ಕರೆದುಕೊಂಡು ಒಟ್ಟಿಗೆ ಏಳು ಹೆಜ್ಜೆ ಹಾಕಿದರು. ಅದಕ್ಕೂ ಮುನ್ನ ಅವರನ್ನು ಮೆರವಣಿ ಮೂಲಕ ಮಂಟಪಕ್ಕೆ ಕರೆತರಲಾಯಿತು.

ಘಟನೆ ಹಿನ್ನೆಲೆ : ಜೈನೂರ್ ಮಂಡಲದ ಯುವತಿ ಜಂಗುಬಾಯಿ ಜೊತೆಗೆ ಕಳೆದ ನಾಲ್ಕು ವರ್ಷಗಳಿಂದ ಸ್ನೇಹ ಬೆಳೆಸಿದ್ದ ಯುವಕ ಛತ್ರುಶವ್, ಕಳೆದ ಒಂದು ವರ್ಷದಿಂದ ಸಾಂಗ್ವಿ ಗ್ರಾಮದ ಸೋಮದೇವಿಯ ಪ್ರೀತಿಯಲ್ಲಿ ಬಿದ್ದಿದ್ದ.

ಸೋಮದೇವಿಯನ್ನು ಮದುವೆಯಾಗುವ ಸುದ್ದಿ ತಿಳಿದ ಜಂಗುಬಾಯಿ ಕೂಡಾ ಆತನನ್ನೇ ಮದುವೆ ಆಗುವ ತೀರ್ಮಾನ ಪ್ರಕಟಿಸಿದ್ದಳು. ಅದರಂತೆ ಛತ್ರುಶವ್ ಇಬ್ಬರೂ ಯುವತಿಯರ ಕುಟುಂಬಸ್ಥರನ್ನು ಮನವೊಲಿಸಿ ಆಮಂತ್ರಣ ಪತ್ರಿಕೆಯಲ್ಲಿ ಇಬ್ಬರು ಪ್ರೇಯಸಿಯರ ಹೆಸರನ್ನು ಮುದ್ರಿಸಿದ್ದ.

ಆರಂಭದಲ್ಲಿ ಸೋಮದೇವಿಯೊಂದಿಗಿನ ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿತ್ತು. ಆದರೆ, ಮುಂದುವರೆದ ಹಾಗೂ ಬದಲಾದ ಸನ್ನಿವೇಶ ಹಿನ್ನೆಲೆಯಲ್ಲಿ ಹಿರಿಯರ ಮತ್ತು ಕುಟುಂಬ ಸದಸ್ಯರ ಒಪ್ಪಿಗೆ ಬಳಿಕ ಮತ್ತೊಂದು ಮದುವೆ ಆಮಂತ್ರಣಗಳನ್ನು ಮರುಮುದ್ರಣ ಮಾಡಲಾಯಿತು.

ಇಬ್ಬರು ಹೆಂಡತಿಯರನ್ನು ಸಮಾನವಾಗಿ ನೋಡಿಕೊಳ್ಳುವುದಾಗಿ ಛತ್ರುಶವ್ ಲಿಖಿತ ಭರವಸೆ ನೀಡಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಇಬ್ಬರು ಯುವತಿಯರು ಛತ್ರುಶವ್ ಕೈ ಹಿಡಿದು ಬರುತ್ತಿರುವುದನ್ನು ಮದುವೆಯ ವಿಡಿಯೋದಲ್ಲಿ ನೋಡಬಹುದಾಗಿದೆ. ಯುವಕ ಇಬ್ಬರು ವಧುಗಳ ಕೈ ಹಿಡಿದ ಹಿನ್ನೆಲೆ ನಾದಸ್ವರ ಕೇಳಿ ಬರುತ್ತಿತ್ತು. ಈ ವಿವಾಹವು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಮೆಚ್ಚಿದರೆ, ಇನ್ನು ಕೆಲವರು ಕಾನೂನುಬಾಹಿರವೆಂದು ಹೇಳುತ್ತಿದ್ದಾರೆ.

ಇತ್ತೀಚೆಗೆಷ್ಟೇ ಇದೇ ಆಸಿಫಾಬಾದ್ ಕ್ಷೇತ್ರದಲ್ಲಿ ಒಂದೇ ಮಂಟಪದಲ್ಲಿ ಯುವಕನೊಬ್ಬ ತನ್ನ ಇಬ್ಬರು ಪ್ರೇಯಸಿಯರನ್ನು ವರಿಸಿದ ಘಟನೆ ನಡೆದಿತ್ತು. ಲಿಂಗಾಪುರ ತಾಲೂಕಿನ ಘುಮನೂರು ಗ್ರಾಮದ ಯುವಕ ಸೂರ್ಯದೇವ್, ಕುಟುಂಬ ಮತ್ತು ಸ್ಥಳೀಯ ಸಮುದಾಯದ ಸಂಪೂರ್ಣ ಬೆಂಬಲದೊಂದಿಗೆ ಇಬ್ಬರು ಯುವತಿಯರಿಗೆ ಮಾಂಗಲ್ಯಧಾರಣೆ ಮಾಡಿದ್ದನು. ಇದೀಗ ಮತ್ತೊಂದು ಅಂತಹದ್ದೇ ಘಟನೆ ನಡೆದಿದೆ.