ಉ‌.ಕ ಸುದ್ದಿಜಾಲ ಅಥಣಿ :

ಬೆಳಗಾವಿ ಜಿಲ್ಲೆಯ ಅಥಣಿ ಮತಕ್ಷೇತ್ರದ ಶಾಸಕರಾಗಿದ್ದ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ದೊರೆಯಲಿ ಎಂದು ಹರಕೆ ಹೊತ್ತಿದ್ದ ಅಥಣಿ ಪಟ್ಟಣದ ಉದ್ಯಮಿ ಹಾಗೂ ಲಕ್ಷ್ಮಣ ಸವದಿ ಅಭಿಮಾನಿ ರಾಮನಗೌಡ ಪಾಟೀಲ ಅವರು, ತಮ್ಮ ಹರಕೆಯನ್ನು ತೀರಿಸಿದ್ದಾರೆ.

ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ದೊರೆಯುವವರೆಗೂ ತಲೆಗೆ ಕಟ್ಟಿರುವ ಅರಿವೆಯನ್ನು ಬಿಚ್ಚುವುದಿಲ್ಲ ಎಂದು ರಾಮನಗೌಡ ಪಾಟೀಲ ಅವರು ಹರಕೆ ಹೊತ್ತಿದ್ದರು. ಇದೀಗ ಜುಲೈ 3, 2026ರಂದು ಮುಖ್ಯಮಂತ್ರಿ ಅವರ ಸಚಿವ ಸಂಪುಟದಲ್ಲಿ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ, ಶನಿವಾರ ರಾಮನಗೌಡ ಪಾಟೀಲ ಹಾಗೂ ಅವರ ಪತ್ನಿ ತಮ್ಮ ನಿವಾಸದಿಂದ ಶ್ರೀ ಸಿದ್ದೇಶ್ವರ ದೇವಸ್ಥಾನದವರೆಗೆ ಉರುಳು ಸೇವೆ ಹಾಗೂ ದೀರ್ಘ ದಂಡ ನಮಸ್ಕಾರ ಸಲ್ಲಿಸಿ ಹರಕೆ ತೀರಿಸಿದರು.

ಲಕ್ಷ್ಮಣ ಸವದಿ ಅವರು ಅಥಣಿ ಕ್ಷೇತ್ರ ಸೇರಿದಂತೆ ರಾಜ್ಯಾದ್ಯಂತ ಅಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಅವರಿಗೆ ಸಚಿವ ಸ್ಥಾನ ದೊರೆಯಬೇಕು ಎಂಬುದು ನಮ್ಮ ಬಹುದಿನಗಳ ಆಶಯವಾಗಿತ್ತು. ಆ ಆಶಯ ಈಡೇರಿದರೆ ಶ್ರೀ ಸಿದ್ದೇಶ್ವರ ಸ್ವಾಮಿಗೆ ಉರುಳು ಸೇವೆ ಸಲ್ಲಿಸಿ ಹರಕೆ ತೀರಿಸುವುದಾಗಿ ಸಂಕಲ್ಪ ಮಾಡಿದ್ದೆ.

ಇದೀಗ ನಮ್ಮ ನಾಯಕರಿಗೆ ಸಚಿವ ಸ್ಥಾನ ದೊರೆತಿರುವುದು ಸಂತಸ ತಂದಿದೆ. ನಮ್ಮ ಸಂಕಲ್ಪದಂತೆ ಇಂದು ದಂಪತಿ ಸಮೇತ ಉರುಳು ಸೇವೆ ಹಾಗೂ ದೀರ್ಘ ದಂಡ ನಮಸ್ಕಾರ ಸಲ್ಲಿಸಿ ಶ್ರೀ ಸಿದ್ದೇಶ್ವರ ಸ್ವಾಮಿಯ ಆಶೀರ್ವಾದ ಪಡೆದಿದ್ದೇವೆ. ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ದೊರೆತಿರುವುದು ಅಥಣಿ ಕ್ಷೇತ್ರದ ಜನರಲ್ಲಿ ಸಂತಸ ಮೂಡಿಸಿದೆ. ಅವರ ಸಚಿವ ಸ್ಥಾನದಿಂದ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯುವ ವಿಶ್ವಾಸವಿದೆ ಎಂದರು.