ಉ.ಕ ಸುದ್ದಿಜಾಲ ಅಥಣಿ :

ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಮತ್ತೊಂದು ಚಿರತೆ ಕಾಣಿಸಿಕೊಂಡಿದ್ದು, ಎರಡೂ ತಾಲೂಕಿನಾದ್ಯಂತ ಚಿರತೆ ಆತಂಕ ಹೆಚ್ಚಾಗಿದೆ.

ಕಾಗವಾಡ ತಾಲೂಕಿನ ಶಿರಗುಪ್ಪಿ ಸಮೀಪ ಮೊಳವಾಡದ ಹೊಲದಲ್ಲಿ ಭಾನುವಾರ ಸಂಜೆ ಚಿರತೆ ಕಾಣಿಸಿತ್ತು, ಅದೇ ರೀತಿ ಅಥಣಿ ತಾಲೂಕಿನ ಅವರಖೋಡ ಗ್ರಾಮದಲ್ಲೂ ಕೂಡ ಪ್ರತ್ಯಕ್ಷವಾಗಿದೆ ಎಂದು ಮಾಹಿತಿ ಲಭಿಸಿದ ನಂತರ ಅರಣ್ಯ ಇಲಾಖೆಯವರು ಪರಿಶೀಲಿಸಿದಾಗ ಹೆಜ್ಜೆ ಗುರುತುಗಳು ಪತ್ತೆಯಾಗಿವೆ.

ಕಾಗವಾಡ ತಾಲೂಕಿನ ಮೊಳವಾಡ – ಶಿರಗುಪ್ಪಿ ರಸ್ತೆಯ ಪಕ್ಕದಲ್ಲಿರುವ ಹೊಲದಲ್ಲಿ ಚಿರತೆ ಕಾಣಿಸಿದೆ. ರೈತ ಬಂದು ಹೇಳಿದ ನಂತರ ಗ್ರಾಮಸ್ಥರು ಹೋಗಿ ಪರಿಶೀಲಿಸಿದಾಗ ಹೆಜ್ಜೆ ಗುರುತುಗಳು ಕಾಣಿಸಿವೆ. ಇದರಿಂದಾಗಿ ಗ್ರಾಮದಲ್ಲಿ ಆತಂಕ ನಿರ್ಮಾಣವಾಗಿದೆ.

ನಂತರ ಮೊಳವಾಡ, ನಾಗನೂರ ಪಿ ಕೆ, ಅವರಖೋಡ ಸೇರಿದಂತೆ ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಡಂಗುರ ಸಾರಲಾಗಿದೆ. ಗ್ರಾಮದ ಹೊಲದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಹೊಲಕ್ಕೆ ಹೋಗುವವರು ಎಚ್ಚರಿಕೆ ವಹಿಸಬೇಕು ಎಂದು ಗ್ರಾಮದ ಎಲ್ಲೆಡೆ ಡಂಗುರ ಸಾರಲಾಗಿದೆ.