ಅಥಣಿ : 

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೃಷ್ಣಾ ನದಿ ತೀರದ ಹುಲಗಬಾಳಿ(ರಾಮವಾಡಿ) ಗ್ರಾಮದ ಶಾಂತಿನಾಥ ತೀರ್ಥಂಕರ ದಿಗಂಬರ ಜೈನ ಮಂದಿರದಲ್ಲಿ ಪಪೂ 108 ವಿದ್ಯಾಭೂಷಣ ಮುನಿ ಮಹಾರಾಜರಿಂದ ಸಮಾಜಭೂಷಣ, ಶ್ರಾವಕ ರತ್ನ ಧರ್ಮಾನುರಾಗಿ ಶಾಂತಿನಾಥ ಬಾಬುರಾವ್‌ ಶೆಟ್ಟಿ ಅವರು ಡಿ.08 ರಂದು ಕ್ಷುಲ್ಲಕ ದೀಕ್ಷೆ ಸ್ವೀಕರಿಸಲಿದ್ದಾರೆ.

ಶಾಂತಿನಾಥ ಬಾಬುರಾವ್ ಶೆಟ್ಟಿ ಅವರು ಅಲ್ಪ ಶಿಕ್ಷಣ ಪಡೆದು ಕೃಷಿ, ವ್ಯಾಪಾರದೊಂದಿಗೆ ಕಳೆದ 35 ವರ್ಷಗಳಿಂದ ಧಾರ್ಮಿಕ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ಜೈನ ಸಮಾಜದ ಅಹಿಂಸಾ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದಾರೆ. ನಿರಂತರವಾಗಿ ಮುನಿ, ಸಾಧು, ಸಂತರ ಸೇವೆ ಮಾಡುತ್ತಿದ್ದಾಗ ಅವರಿಗೆ ವೈರಾಗ್ಯ ಪ್ರಾಪ್ತಿಯಾಗಿರುವುದರಿಂದ ಕಳೆದ 30 ವರ್ಷಗಳಿಂದ ಮುನಿಗಳಂತೆ ತಮ್ಮ ದಿನಚರಿ ಪಾಲಿಸುತ್ತ ಬಂದಿದ್ದಾರೆ. 21 ವರ್ಷಗಳಿಂದ ಅಖಂಡ ಬ್ರಹ್ಮಚಾರ್ಯ ವೃತ ಪ್ರತಿಪಾದನೆ ಮಾಡುತ್ತಿದ್ದಾರೆ. 2015 ರಲ್ಲಿ ಪಪೂ ಶ್ರೀವಿದ್ಯಾಭೂಷಣ ಮುನಿಗಳಿಂದ ಪ್ರತಿಮಾ ಪಾಲನೆ, ಸಾಮೂಹಿಕ ಶುದ್ಧ ಆಹಾರ ಸೇವನೆ, ದೇವಪೂಜೆ ಪ್ರತಿಕೃಮನ, ಪ್ರಾಯಶ್ಚಿತ್, ಪಾಲನೆ ಮಾಡುತ್ತಿದ್ದಾರೆ.

ವಿದ್ಯಾಭೂಷಣ ಮುನಿ ಮಹಾರಾಜರು ಮಾತನಾಡುತ್ತ ಧರ್ಮಾನುರಾಗಿ ಶಾಂತಿನಾಥ ಶೆಟ್ಟಿ ಇವರು ಜೀವನದಲ್ಲಿ ನಿರಂತರವಾಗಿ ಜೈನ ಸಮಾಜದ ಅಹಿಂಸಾ ತತ್ವಗಳ ಪಾಲನೆಯೊಂದಿಗೆ ಮುನಿ, ಧರ್ಮದ ಸೇವೆ, ಶ್ರಾವಕ ವೃತ ಪಾಲಿಸುತ್ತಾ ಬಂದಿದ್ದಾರೆ. ಅವರಿಗೆ ವೈರಾಗ್ಯ ಪ್ರಾಪ್ತಿಯಾಗಿದ್ದು ದೀಕ್ಷೆ ಪಡೆಯಲು ನಿರ್ಧರಿಸಿದ್ದಾರೆ. ಬರುವ ಡಿ.8 ರಂದು ಬೆಳಗ್ಗೆ ಕ್ಷುಲಕ್ ದೀಕ್ಷೆ ನೀಡಲಿದ್ದೇವೆ ಎಂದರು.

ಕ್ಷುಲ್ಲಕ ದೀಕ್ಷೆ ಸ್ವೀಕರಿಸುವ ಶಾಂತಿನಾಥ ಶೆಟ್ಟಿ ಮಾತನಾಡಿ ಹುಲಗಬಾಳಿ(ರಾಮವಾಡಿ)ಗ್ರಾಮದಲ್ಲಿ ಜೈನ ಸಮಾಜದ ಮಂದಿರ ನಿರ್ಮಿಸಲು 35 ವರ್ಷಗಳ ಹಿಂದೆ ಎಲ್ಲ ಸಮಾಜ ಬಾಂಧವರು ಒಂದುಗೂಡಿ ಪ್ರಯತ್ನಿಸಿದ್ದೇವೆ. ಇದೇ ಮಂದಿರದಲ್ಲಿ 2015 ರಂದು ಆಚಾರ್ಯ ವಿದ್ಯಾಭೂಷಣ ಮುನಿಮಹಾರಾಜರು ಚಾತುರ್ಮಾಸ ಮಾಡಿದ್ದರು. ನಿರಂತರ 4 ತಿಂಗಳ ಅವರ ಸೇವೆಯಲ್ಲಿ ತೊಡಗಿದಾಗ ವೈರಾಗ್ಯ ಪ್ರಾಪ್ತಿಯಾಯಿತು. ಜೀವನದಲ್ಲಿ ನಾಲ್ಕು ಆಶ್ರಮಗಳಲ್ಲಿ ಮೂರು ಆಶ್ರಮಗಳನ್ನು ತ್ಯಜಿಸಿಸಿದ್ದು ಈಗ ಸನ್ಯಾಸ ವೃತ ಸ್ವೀಕರಿಸಲಿದ್ದೇನೆ ಎಂದರು.

ಕ್ಷುಲ್ಲಕ ದೀಕ್ಷೆಯನ್ನು ಪ್ರತಿಷ್ಠಾಚಾರ್ಯರಾದ ಕರ್ನಾಟಕ ರತ್ನ ಬಿರುದು ಪಡೆದ ಆನಂದ ಉಪಾದ್ಯೆ (ಸವದಿ), ಶ್ರೀಪಾಲ ಉಪಾಧ್ಯೆ, (ರಾಮವಾಡಿ) ಅವರು ನೆರವೇರಿಸಲಿದ್ದಾರೆ.