ಉ.ಕ ಸುದ್ದಿಜಾಲ ಅಥಣಿ :
ಲೋಕಭವನದ ಗಾಜಿನ ಮನೆಯಲ್ಲಿ ಸೋಮವಾರ ಸಂಜೆ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಲಕ್ಷ್ಮಣ್ ಸವದಿ ಸೇರಿದಂತೆ 19 ನೂತನ ಸಚಿವರುಗಳಿಗೆ ಗೌಪ್ಯತಾ ಪ್ರಮಾಣವಚನ ಬೋಧಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಲಕ್ಷ್ಮಣ್ ಸವದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ, ಹ್ಯಾಟ್ರಿಕ್ ಬಾರಿಸಿದ್ದಾರೆ
ಸವದಿ ಹಾದಿಗೆ ಮುಳ್ಳಾದ ಜಾರಕಿಹೊಳಿ :
ಲಕ್ಷ್ಮಣ ಸವದಿ ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭಾ ಕ್ಷೇತ್ರದಿಂದ 2023 ರಲ್ಲಿ ಬಿಜೆಪಿಯಿಂದ ಟಿಕೆಟ್ ಬಯಸಿದ್ದರು. ಆದರೆ ಅವರ ಬೇಡಿಕೆಗೆ ಅಡ್ಡಗಾಲಾಗಿದ್ದು ಮತ್ತೋರ್ವ ಪ್ರಭಾವಿ ರಾಜಕಾರಣಿ ರಮೇಶ್ ಜಾರಕಿಹೊಳಿ. ಅಥಣಿಯಿಂದ ಸ್ನೇಹಿತ ಮಹೇಶ್ ಕುಮಟಳ್ಳಿಗೆ ಟಿಕೆಟ್ ಕೊಡಲೇಬೇಕು ಅಂತ ಪಟ್ಟು ಹಿಡಿದಿದ್ದ ಜಾರಕಿಹೊಳಿ, ಕುಮಟಳ್ಳಿಗೆ ಟಿಕೆಟ್ ಕೊಡದಿದ್ದರೆ ನನಗೂ ಟಿಕೆಟ್ ಬೇಡ ಅಂತ ಪಟ್ಟು ಹಿಡಿದಿದ್ದರು. ಕೊನೆಗೆ ಜಾರಕಿಹೊಳಿ ಹಠಕ್ಕೆ ಮಣಿದ ಬಿಜೆಪಿ ಹೈಕಮಾಂಡ್ ಮಹೇಶ್ ಕುಮಟಳ್ಳಿಗೆ ಅಥಣಿ ಟಿಕೆಟ್ ನೀಡಿದೆ.
ಮಹೇಶ್ ಕುಮಟಳ್ಳಿ ವಿರುದ್ಧ ಸೋತಿದ್ದ ಸವದಿ
ಸವದಿ, ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾಗಿದ್ದರು.ಈ ಹಿಂದೆ ಅಥಣಿಯಿಂದ ಮೂರು ಬಾರಿ ಶಾಸಕರಾಗಿದ್ದರು. ಆದರೆ 2018ರ ಚುನಾವಣೆಯಲ್ಲಿ ಆಗ ಕಾಂಗ್ರೆಸ್ನಲ್ಲಿದ್ದ ಮಹೇಶ್ ಕುಮಟಳ್ಳಿ ವಿರುದ್ಧ ಸೋತಿದ್ದರು. ಬದಲಾದ ರಾಜಕೀಯದಲ್ಲಿ ಕುಮಟಳ್ಳಿ ಬಿಜೆಪಿ ಸೇರಿದ್ದಾಗ, 2019ರ ಉಪ ಚುನಾವಣೆಯಲ್ಲಿ ಇವರಿಗೆ ಟಿಕೆಟ್ ನೀಡಿಲ್ಲ. ಬದಲಾಗಿ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಲಾಯ್ತು. ಡಿಸಿಎಂ ಆಗಿ, ಸಚಿವರಾಗಿ ಅನುಭವ ಬಿಎಸ್ ಯಡಿಯೂರಪ್ಪ, ಸದಾನಂದಗೌಡ ಸಂಪುಟದಲ್ಲಿ ಸಚಿವರಾಗಿ ವಿವಿಧ ಖಾತೆ ನಿರ್ವಹಿಸಿದರು. ಬಿಜೆಪಿ ಪ್ರಬಲ ನಾಯಕರಾಗಿದ್ದ ಲಕ್ಷ್ಮಣ ಸವದಿ ಕರ್ನಾಟಕದ ಎಂಟನೇ ಉಪಮುಖ್ಯಮಂತ್ರಿಯಾಗಿದ್ದರು. 2019 ರಿಂದ 2021 ರವರೆಗೆ ಕರ್ನಾಟಕದ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದರು. ವಿಧಾನ ಪರಿಷತ್ನ ಉಪ ನಾಯಕರಾಗಿದ್ದರು.
ಲಕ್ಷ್ಮಣ್ ಸವದಿ ಹಿನ್ನೆಲೆ:
ಪೂರ್ಣ ಹೆಸರು : ಲಕ್ಷ್ಮಣ ಸಂಗಪ್ಪ ಸವದಿ
ಜನನ : 16 ಫೆಬ್ರವರಿ 1960 (ಸತ್ತಿ ಗ್ರಾಮ)
ಸ್ವಗ್ರಾಮ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರು.
ಪೋಷಕರು: ಸಂಗಪ್ಪ ಪರಪ್ಪ ಸವದಿ (ತಂದೆ) ಮತ್ತು ಸಲ್ಲವ್ವ ಸಂಗಪ್ಪ ಸವದಿ (ತಾಯಿ).
ವಿದ್ಯಾಭ್ಯಾಸ : 1978ರಲ್ಲಿ ಅಥಣಿಯ ಎಸ್ಎಂಎಸ್ (SMS) ಕಾಲೇಜಿನಲ್ಲಿ ಪಿಯುಸಿ ಉತ್ತೀರ್ಣ.
ಕುಟುಂಬ : ಕೃಷಿ ಹಿನ್ನೆಲೆಯ ಕುಟುಂಬ.
ಪತ್ನಿ : ಪುಷ್ಪಾ ಲಕ್ಷ್ಮಣ ಸವದಿ.
ಮಕ್ಕಳು : ಮೂರು ಜನ ಗಂಡು ಮಕ್ಕಳು, ಓರ್ವ ಪುತ್ರಿ.
ರಾಜಕೀಯ ಜೀವನದ ಮೈಲಿಗಲ್ಲುಗಳು :
1995 – 1999: ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್ನ ನಿರ್ದೇಶಕರಾಗಿ ಮೊದಲ ಹಾಗೂ ಎರಡನೇ ಬಾರಿಗೆ ಆಯ್ಕೆ. ನಂತರ ಅದೇ ಬ್ಯಾಂಕಿನ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಣೆ.
1999 : ಅಥಣಿ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ. ಕಾಂಗ್ರೆಸ್ನ ಶಹಜಾನ್ ಡೊಂಗರಗಾಂವ ವಿರುದ್ಧ 3,109 ಮತಗಳಿಂದ ಪರಾಭವ.
2000 : ಎಸ್.ಎಂ.ಕೃಷ್ಣ ಸರ್ಕಾರದ ಅವಧಿಯಲ್ಲಿ ಪಂಪ್ಸೆಟ್ಗಳಿಗೆ ವಿದ್ಯುತ್ ಮೀಟರ್ ಅಳವಡಿಸುವುದನ್ನು ವಿರೋಧಿಸಿ ‘ರೈತ ಹಿತರಕ್ಷಣಾ ಸಮಿತಿ’ಯನ್ನು ಸಂಘಟಿಸಿ ಬೃಹತ್ ಪ್ರತಿಭಟನೆ ನಡೆಸಿ, ಸರ್ಕಾರದ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
2001 : ಹಿಪ್ಪರಗಿ ಬ್ಯಾರೇಜ್ ನೀರಾವರಿ ಕಾಲುವೆಗಾಗಿ ಹೋರಾಟ ನಡೆಸಿ, ಅದನ್ನು ಪೂರ್ಣಗೊಳಿಸುವಲ್ಲಿ ಪ್ರಮುಖ ಪಾತ್ರ.
2002: ಬೆಳಗಾವಿ ಡಿ.ಸಿ.ಸಿ (DCC) ಬ್ಯಾಂಕ್ ನಿರ್ದೇಶಕರಾಗಿ ಮರು ಆಯ್ಕೆ.
2004 : ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆ. ದಿ. ಅನಂತ್ಕುಮಾರ್ ಮತ್ತು ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರ್ಪಡೆ. ಅಥಣಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಶಹಜಾನ್ ಡೊಂಗರಗಾಂವ ವಿರುದ್ಧ 31,253 ಮತಗಳ ಅಂತರದಿಂದ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆ.
2005 – 2008 : ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕಿನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಣೆ.
2008 : ಅಥಣಿ ಕ್ಷೇತ್ರದಿಂದ 2ನೇ ಬಾರಿಗೆ ಶಾಸಕರಾಗಿ ಆಯ್ಕೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ಸಹಕಾರ ಸಚಿವರಾಗಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿಯಾಗಿ ನೇಮಕ. ಡಿ.ಸಿ.ಸಿ ಮತ್ತು ಬ್ಯಾಂಕ್ ನಿರ್ದೇಶಕರಾಗಿಯೂ ಮರು ಆಯ್ಕೆ.
2009 : ಸಹಕಾರ ಸಚಿವರಾಗಿ ರೈತರಿಗೆ ಶೇ.1ರ ಬಡ್ಡಿ ದರದಲ್ಲಿ ಕೃಷಿ ಸಾಲ ವಿತರಿಸುವ ಕರಡು ಸಿದ್ಧಪಡಿಸಿ, ಅನುಷ್ಠಾನಗೊಳಿಸುವ ಮೂಲಕ ರಾಜ್ಯದಲ್ಲಿ ಕ್ರಾಂತಿ ಮಾಡಿದರು. ವೈದ್ಯನಾಥ್ ಸಮಿತಿ ವರದಿ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿ ‘ರಾಜ್ಯ ಸಹಕಾರ ರಂಗದ ಧುರೀಣ’ ಎಂಬ ಖ್ಯಾತಿಗೆ ಪಾತ್ರರಾದರು.
2010 : ಶೇ. 90ರಷ್ಟು ರಾಜ್ಯ ಮಟ್ಟದ ಸಹಕಾರಿ ಸಂಸ್ಥೆಗಳು ಹಾಗೂ ಒಕ್ಕೂಟಗಳನ್ನು ಬಿಜೆಪಿ ಆಡಳಿತಕ್ಕೆ ತರುವಲ್ಲಿ ಮುಂದಾಳತ್ವ ವಹಿಸಿದರು.
2012 : ಕರ್ನಾಟಕ ಸರ್ಕಾರದ ಮುಖ್ಯ ಸಚೇತಕರಾಗಿ ನೇಮಕ. ಸಿಎಂ ಡಿ.ವಿ. ಸದಾನಂದಗೌಡ ಅವರ ಸಂಪುಟದಲ್ಲಿ ಸಹಕಾರ, ಕೃಷಿ ಉತ್ಪನ್ನ ಮತ್ತು ಮಾರುಕಟ್ಟೆ ಸಚಿವರಾಗಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಣೆ. ನಂತರ ಬೆಳಗಾವಿ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆ.
2013 : ಅಥಣಿ ಕ್ಷೇತ್ರದಿಂದ 3ನೇ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ‘ಹ್ಯಾಟ್ರಿಕ್’ ಸಾಧನೆ.
2018 : 4ನೇ ಬಾರಿಗೆ ಸ್ಪರ್ಧೆಗಿಳಿದಾಗ, ಕಾಂಗ್ರೆಸ್ ಅಭ್ಯರ್ಥಿ ಮಹೇಶ್ ಕುಮಠಳ್ಳಿ ವಿರುದ್ಧ ಕೇವಲ 2,741 ಮತಗಳ ಅಂತರದಿಂದ ಸೋಲು.
ಸೋತರೂ ಒಲಿದಿದ್ದ ಡಿಸಿಎಂ ಹುದ್ದೆ :
2019 : ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾಗಿ ನೇಮಕ. ಆಗಸ್ಟ್ 20 ರಂದು ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ರಾಜ್ಯದ 11ನೇ ಉಪಮುಖ್ಯಮಂತ್ರಿಯಾಗಿ (ಡಿಸಿಎಂ) ಪ್ರಮಾಣ ವಚನ ಸ್ವೀಕರಿಸಿದರು. ಸೆಪ್ಟೆಂಬರ್ 27 ರಂದು ಸಾರಿಗೆ ಮತ್ತು ಕೃಷಿ ಇಲಾಖೆ ಹಾಗೂ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ.
2020 : ಅಥಣಿಯ ನಾಗನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ ಅವಿರೋಧ ಆಯ್ಕೆ. ಫೆಬ್ರವರಿ 5 ರಂದು ವಿಧಾನ ಪರಿಷತ್ (MLC) ಉಪಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾದರು.
ಏಪ್ರಿಲ್ 14, 2023 : ಎಂಎಲ್ಸಿ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಅಂದೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ.
2023ರ ಚುನಾವಣೆ : ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಠಳ್ಳಿ ವಿರುದ್ಧ 76,122 ಮತಗಳ ಬೃಹತ್ ಅಂತರದಿಂದ ಭರ್ಜರಿ ಜಯ.
ಆಗಸ್ಟ್ 3, 2026: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಲಕ್ಷ್ಮಣ್ ಸವದಿ ಅವರು ಮೂರನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
