ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯ ವಿವಿಧ 5 ಪ್ರಕರಣಗಳಲ್ಲಿ ಒಟ್ಟು 15 ಜನರನ್ನು ಬಂಧಿಸಿದ ಪೊಲೀಸರು ಒಟ್ಟು 34,250 ರೂಪಾಯಿ ಮೌಲ್ಯದ 694 ಗ್ರಾಂ ಗಾಂಜಾ, ಒಂದು ಕಾರ್, ಒಂದು ಬೈಕ್ ಮತ್ತು 5 ಮೊಬೈಲ್’ಗಳನ್ನು ಜಪ್ತಿ ಮಾಡಿದ್ದಾರೆ.

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ನಗರದ ಶೌರ್ಯ ಸರ್ಕಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಅಂಬೇವಾಡಿಯ ಕಿರಣ ಆಡವ ಮತ್ತು ಶಿನೋಳಿಯ ರಾಹುಲ್ ಎಂಬಾತನನ್ನು ಸಿಇಎನ್ ಎಸಿಪಿ ಜೆ ರಘು ನೇತೃತ್ವದ ಪೊಲೀಸರ ತಂಡ ಬಂಧಿಸಿ ಒಟ್ಟು 2 ಸಾವಿರ ರೂಪಾಯಿ ಮೊತ್ತದ 200 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಅದರಂತೆ ಗೋಡ್ಸೆವಾಡಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವಿನಾಯಕ ಕೊಲ್ಹಾಪುರೆ, ಸಂದೇಶ ಗವ್ಹಾಲಿ, ಕುಮಾರ್ ಪುಜೇರಿ, ರೋಹಿತ್ ಮುಳವೆ ಮತ್ತು ಸೌರಭ ಸಾತುಸಕರ ಎಂಬುವವರನ್ನು ಬಂಧಿಸಿದ ಟಿಳಕವಾಡಿ ಪಿಐ ಪರಶುರಾಮ ನೇತೃತ್ವದ ಪೊಲೀಸರ ತಂಡ ಒಟ್ಟು 25 ಸಾವಿರದ 180 ರೂಪಾಯಿ ಮೊತ್ತದ 294 ಗ್ರಾಂ. ಗಾಂಜಾ ವಶಕ್ಕೆ ಪಡೆದು ಟಿಳಕವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನು ಬೆಳಗಾವಿ ಕ್ಯಾಂಪ್ ಪ್ರದೇಶದ ಹಾಜಾಪೂರ ರಸ್ತೆಯ ಬಳಿ ಓಸಿ ಮುಂಬೈ ಮಟಕಾ ಆಟದಲ್ಲಿ ತೊಡಗಿದ್ದ ಪ್ರಸನ್ನ ಉಪ್ಪಾರ ಎಂಬಾತನನ್ನು ಕ್ಯಾಂಪ್ ಪಿ ಎಸ್ ಐ ರುಕ್ಮೀಣಿ ನೇತೃತ್ವದ ತಂಡ ಬಂಧಿಸಿ 2300 ರೂಪಾಯಿಯನ್ನು ವಶಕ್ಕೆ ಪಡೆದು ಕ್ರಮ ಜರುಗಿಸಿದೆ.

ಇನ್ನು ಬೆಳಗಾವಿಯ ಕಲ್ಯಾನಟ್ಟಿ-ರಂಗಧೋಳಿ ರಸ್ತೆಯಲ್ಲಿ ಓಸಿ ಮುಂಬೈ ಮಟಕಾ ಆಟದಲ್ಲಿ ತೊಡಗಿದ್ದ ಶ್ಯಾಮ ಮುತ್ಯಾನಟ್ಟಿ, ಕಿರಣ ಕೆಂಗೆಣ್ಣವರ, ಪರಶುರಾಮ ದೇಸೂರಕರ, ನಾಮದೇಶ ಕಿಲ್ಲೇಕರ, ಲಕ್ಷ್ಮ ಬಡ್ರಿ ಮತ್ತು ರಾಜು ಶಿಂಧೆ ಎಂಬಾತನನ್ನು ಗ್ರಾಮೀಣ ಪಿ ಎಸ್ ಐ ಲಕ್ಷ್ಮಣ ಜೋಡಟ್ಟಿ ಮತ್ತು ಸಿಬ್ಬಂದಿಗಳು ಬಂಧಿಸಿದ್ದು, ಒಟ್ಟು 34,970 ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಇನ್ನು ಬೆಳಗಾವಿ ತಾಲೂಕಿನ ಸುಳೇಭಾವಿಯ ಡಾ. ಅಂಬೇಡ್ಕರ್ ಗಲ್ಲಿ, ಶ್ರೀ ದುರ್ಗಾದೇವಿ ಮಂದಿರದ ಹತ್ತಿರ ಓಸಿ ಮುಂಬೈ ಮಟಕಾ ಆಟದಲ್ಲಿ ತೊಡಗಿದ್ದ ಅರ್ಜುನ ಗಡಗಿ ಮತ್ತು ರಾಜು ಗಡಗಿಯನ್ನು ಮಾರಿಹಾಳ ಪಿ ಎಸ್ ಐ ಚಂದ್ರಶೇಖರ್ ಸಿ ಮತ್ತು ಸಿಬ್ಬಂದಿಗಳು ಬಂಧಿಸಿ 2300 ರೂಪಾಯಿ ನಗದನ್ನು ಜಪ್ತಿ ಮಾಡಿದ್ದಾರೆ. ಈತನ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಈ ಎಲ್ಲಾ ಯಶಸ್ವಿ ಕಾರ್ಯಾಚರಣೆಗಳಿಗಾಗಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ, ಐ.ಪಿ.ಎಸ್. ಮತ್ತು ಉಪ ಆಯುಕ್ತರು ಸಂಬಂಧಪಟ್ಟ ಪೊಲೀಸ್ ಠಾಣೆಗಳ ಪಿ.ಐ., ಪಿ.ಎಸ್.ಐ. ಮತ್ತು ಅವರ ತಂಡದ ಸಿಬ್ಬಂದಿಯನ್ನು ವಿಶೇಷವಾಗಿ ಶ್ಲಾಘಿಸಿದ್ದಾರೆ.