ಉ.ಕ ಸುದ್ದಿಜಾಲ ಬೆಳಗಾವಿ :

ಈ ಬಾರಿ ತೀವ್ರ ಬರದಿಂದಾಗಿ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರಣ ಸರ್ಕಾರ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ಕಬ್ಬು ಬೆಳೆಗಾರರಿಗೆ ಸೂಕ್ತ ದರ ಸಿಗುವಂತೆ ಆದೇಶ ಹೊರಡಿಸಬೇಕು.

ಬೆಳಗಾವಿ ಅಧಿವೇಶನದಲ್ಲಿಯೇ ಈ ನಿರ್ಣಯ ಕೈಗೊಳ್ಳಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಆಗ್ರಹಿಸಿದರು.

ಅಧಿವೇಶನ ಹೆಸರಿನಲ್ಲಿ ಸರ್ಕಾರ ಪ್ರತಿ ವರ್ಷ ನಾಟಕ ಮಾಡುತ್ತದೆ. ಇದೂವರೆಗೆ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳು, ಜಾರಿಗೊಳಿಸಿದ ಯೋಜನೆಗಳ, ವೆಚ್ಚಗಳ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕು’ ಎಂದೂ ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜ್ಯದ 223 ತಾಲ್ಲೂಕುಗಳು ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿವೆ. ಮೂರು ವರ್ಷಗಳಿಂದ ಅತಿವೃಷ್ಟಿ, ಮಳೆಹಾನಿ, ಪ್ರವಾಹ, ಬರ ಮುಂತಾದ ಕಾರಣಗಳಿಂದ ಬೆಳೆಗಳು ಹಾಳಾಗಿವೆ.

ಕೃಷಿ ಸಾಲ ಪಡೆದ ರೈತರಿಗೆ ಸಾಲದ ಹಣ ಭರಿಸುವ ಶಕ್ತಿ ಇಲ್ಲ. ಬೆಳೆಗೆ ಹಾಕಿದ ಹಣ ಕೂಡ ಮರಳಿ ಬಂದಿಲ್ಲ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದರು.

ಕೈಗಾರಿಕೆ, ಉದ್ಯಮಿಗಳಿಗೆ, ಸಾಲ ಮನ್ನಾ, ತೆರಿಗೆ ಮನ್ನಾ ಮಾಡಿರುವ ರೀತಿ ರೈತರ ಎಲ್ಲ ಬ್ಯಾಂಕು ಹಾಗೂ ಸಹಕಾರ ಸಂಘಗಳ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಲೇಬೇಕು. 60 ವರ್ಷ ಪೂರೈಸಿದ ರೈತರಿಗೆ ತಿಂಗಳಿಗೆ ಕನಿಷ್ಠ ₹5000 ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು ಎಂದರು.

ಬರಗಾಲದಿಂದ ಕಬ್ಬು ಇಳುವರಿ ಅರ್ಧದಷ್ಟು ಕಡಿಮೆಯಾಗಿದೆ. ಸಕ್ಕರೆ ಹಾಗೂ ಎಥೆನಾಲ್‌ಗೆ ಬೇಡಿಕೆ ಹೆಚ್ಚಿದೆ. ಕಾರಣ ಸಕ್ಕರೆ ಕಾರ್ಖಾನೆಗಳು ಪೈಪೋಟಿಯಲ್ಲಿ ಕಬ್ಬು ಖರೀದಿಸಲು ಮುಂದಾಗುತ್ತಿವೆ. ರೈತರಿಗೆ ಮಾತ್ರ ಸೂಕ್ತ ದರ ನೀಡುತ್ತಿಲ್ಲ. ಆದ್ದರಿಂದ ರೈತರು ಈಗಲೇ ಜಾಗೃತರಾಗಬೇಕು. ದೊಡ್ಡ ದರಕ್ಕಾಗಿ ಪಟ್ಟು ಹಿಡಿಯಬೇಕು ಎಂದೂ ಸಲಹೆ ನೀಡಿದರು.

ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಕಡಿಮೆ ತೋರಿಸಿ ದಾರಿ ತಪ್ಪಿಸುತ್ತಿವೆ. ತೂಕದಲ್ಲಿ ಮೋಸ ನಡೆಯುತ್ತಿದೆ. ಕಬ್ಬಿನ ದರದಲ್ಲಿಯೂ ವಂಚನೆ ಮಾಡುತ್ತಿದ್ದಾರೆ. ಆಧುನಿಕ ತೂಕದ ಪದ್ಧತಿ ಅಳವಡಿಸಿದರೆ ಇದಕ್ಕೆ ಕಡಿವಾಣ ಹಾಕಬಹುದು.

ಅದರಲ್ಲೂ ಬೆಳಗಾವಿ ಜಿಲ್ಲೆಯೊಂದರಲ್ಲೇ 2 ಕೋಟಿ ಟನ್‌ ಕಬ್ಬು ಬೆಳೆಯುತ್ತದೆ. ರೈತರಿಗೆ ಇಷ್ಟೆಲ್ಲ ಅನ್ಯಾಯವಾದರೂ ಯಾವೊಬ್ಬ ಶಾಸಕ ಕೂಡ ನೆರವಿಗೆ ಬಂದಿಲ್ಲ’ ಎಂದೂ ಅವರು ಕಿಡಿ ಕಾರಿದರು.

ಪ್ರತಿ ಟನ್ ಕಬ್ಬು ಉತ್ಪಾದನೆಗೆ ಕನಿಷ್ಠ 3,580 ವೆಚ್ಚ ತಗಲುತ್ತದೆ ಎಂದು ಕೃಷಿ ಬೆಲೆ ಆಯೋಗ ಅಂದಾಜು ಮಾಡಿದೆ. ಆದರೆ, ಕೇಂದ್ರ ಸರ್ಕಾರ ₹3,150 ದರ ನಿಗದಿ ಮಾಡಿದೆ. ವೆಚ್ಚಕ್ಕಿಂತ ಕಡಿಮೆ ಬೆಲೆ ನಿಗದಿ ಮಾಡುವುದು ಯಾವ ರೀತಿಯ ನ್ಯಾಯ’ ಎಂದೂ ಶಾಂತಕುಮಾರ ಪ್ರಶ್ನಿಸಿದರು.