ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಅನಾವರಣ ಮಾಡುವ ದಿನ ಪ್ರತಿಭಟನೆ ಮಾಡುವುದಾಗಿ ಹೇಳಿಕೆ ನೀಡಿರುವ ರಮೇಶ ಜಾರಕಿಹೊಳಿಗೆ ಖಡಕ್ ಎಚ್ಚರಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಜನರ ಭಾವನೆಗಳ ವಿರುದ್ಧ, ಬೆಂಕಿಯ ಜೊತೆ ಸರಸವಾಡುತ್ತಿದ್ದೀರಿ ಎಚ್ಚರ ಎಂದಿದ್ದಾರೆ.

ಶನಿವಾರ ಶಿವರಾತ್ರಿಯ ಸಂದರ್ಭದಲ್ಲಿ ರಾಜಹಂಸಗಡದ ಸಿದ್ದೇಶ್ವರ ದೇವಸ್ಥಾನದಲ್ಲಿ ಚನ್ನರಾಜ ಹಟ್ಟಿಹೊಳಿ ಬೆಳಗ್ಗೆ ಪೂಜೆ ಇಟ್ಟುಕೊಂಡಿದ್ದರು. ಪೂಜೆ ಮುಗಿಸಿ ಹೊರಡುವ ಸಂದರ್ಭದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಕಾರು ಎದುರಾಯಿತು. ಚನ್ನರಾಜ ಹಟ್ಟಿಹೊಳಿ ಕಾರಿಗೆ ಮುಂದೆ ಹೋಗದಂತೆ ರಮೇಶ ಜಾರಕಿಹೊಳಿ ಕಾರು ಅಡ್ಡ ಬಂದು ನಿಂತಿತು.

ಚನ್ನರಾಜ ಹಟ್ಟಿಹೊಳಿ ತಾಳ್ಮೆಯಿಂದಲೇ ಕೆಲ ಹೊತ್ತು ಕಾದರೂ ರಮೇಶ ಜಾರಕಿಹೊಳಿ ಕಾರಿನ ಚಾಲಕ ದಾರಿ ಬಿಟ್ಟು ಕೊಡಲಿಲ್ಲ. ನಂತರ ಚನ್ನರಾಜ ಹಟ್ಟಿಹೊಳಿ ಅವರು ತಮ್ಮ ಕಾರಿನ ಹಿಂದೆ ನಿಂತ ಕಾರಿನವರಿಗೆ ವಿನಂತಿಸಿ ಹಿಂದೆ ಸರಿಸಿ ತಮ್ಮ ಕಾರನ್ನು ಪಕ್ಕದಿಂದ ತೆಗೆದುಕೊಂಡು ಹೊರಟರು.

ಈ ಸಂದರ್ಭದಲ್ಲಿ ಅಲ್ಲಿದ್ದ ಜನರು ಚನ್ನರಾಜ ಹಟ್ಟಿಹೊಳಿಗೆ ಜಯವಾಗಲಿ ಎಂದು ಘೋಷಣೆ ಕೂಗತೊಡಗಿದರು. ನೀವು ಮುಂದೆ ಹೋಗಿ, ನಾವು ನಿಮ್ಮೊಂದಿಗಿದ್ದೇವೆ ಎಂದು ಕೂಗಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಚನ್ನರಾಜ ಹಟ್ಟಿಹೊಳಿ, ಯಾರ್ರೀ ರಮೇಶ ಜಾರಕಿಹೊಳಿ? ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೂ ಇವರಿಗೂ ಏನು ಸಂಬಂಧ?

ನಿಮ್ಮ ಗೋಕಾಕ ಕ್ಷೇತ್ರವನ್ನು ನೀವು ನೋಡಿಕೊಳ್ಳಿ. ಗ್ರಾಮೀಣ ಕ್ಷೇತ್ರದ ಶಾಸಕರು ಸಮರ್ಥರಿದ್ದಾರೆ. ಉತ್ತಮ ಕೆಲಸ ಮಾಡುತ್ತಿದ್ದಾರೆ. ಜನರ ವಿಶ್ವಾಸಗಳಿಸಿದ್ದಾರೆ. ಅವರ ಕ್ಷೇತ್ರವನ್ನು ಅವರು ನೋಡಿಕೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು.

ನೂರು ವರ್ಷದಿಂದ ಬೆಳಗಾವಿ ಗ್ರಾಮೀಣ ಜನರ ಕನಸಿತ್ತು. ರಾಜಹಂಸಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣವಾಗಬೇಕೆನ್ನುವ ಕನಸು ಇಂದು ಈಡೇರಿದೆ. ರಮೇಶ ಜಾರಕಿಹೊಳಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಏನು ಸಂಬಂಧ? ಗೋಕಾಕ ಕ್ಷೇತ್ರದ ಶಾಸಕರು ಅವರು, ಬೆಳಗಾವಿ ತಾಲೂಕಿಗೆ ಏನು ಸಂಬಂಧ? ಈ ಭಾಗದ ಶಾಸಕರು ಲಕ್ಷ್ಮೀ ಹೆಬ್ಬಾಳಕರ.

ಈ ಭಾಗದ ಬಗ್ಗೆ ವಿಚಾರ ಮಾಡಲು ಅವರಿಗೆ ಸಾಕಷ್ಟು ಜ್ಞಾನವಿದೆ. ನೀವು ಗೋಕಾಕದ್ದು ವಿಚಾರ ಮಾಡಿಕೊಳ್ಳಿ. ಇಲ್ಲಿ ಹಸ್ತಕ್ಷೇಪ ಮಾಡಲು ನಿಮಗೇನೂ ಹಕ್ಕಿಲ್ಲ. ನಿಮ್ಮ ಕ್ಷೇತ್ರದ ಬಗ್ಗೆ ವಿಚಾರ ಮಾಡಿಕೊಳ್ಳಿ ಎಂದು ಚನ್ನರಾಜ ಎಚ್ಚರಿಸಿದರು.

ಶಿಷ್ಠಾಚಾರ ಎಲ್ಲೂ ಉಲ್ಲಂಘನೆಯಾಗಿಲ್ಲ. ಆಮಂತ್ರಣ ಪತ್ರಿಕೆ ಇನ್ನೂ ಬಂದಿಲ್ಲ.

ಜಿಲ್ಲಾಡಳಿತದಿಂದ ಇನ್ನೂ ಆಮಂತ್ರಣ ಪತ್ರಿಕೆಯೇ ಬಂದಿಲ್ಲ. ನಾನು ಇವರ ಹಾಗೆ ಗಾಳಿಯಲ್ಲಿ ಗುಂಡು ಹಾರಿಸುವುದಿಲ್ಲ. ಆಮಂತ್ರಣ ಪತ್ರಿಕೆಯೇ ಬಾರದಿದ್ದಾಗ ಶಿಷ್ಠಾಚಾರ ಉಲ್ಲಂಘನೆ ಎಲ್ಲಿಂದ ಬಂತು? ಇವರು ಇಂತಹ ಮಹತ್ವವಾದ ಕಾರ್ಯಕ್ರಮಕ್ಕೆ ವಿಘ್ನವನ್ನುಂಟು ಮಾಡಲು ಹೊರಟಿದ್ದಾರೆ. ಸಮಸ್ತ ಛತ್ರಪತಿ ಶಿವಾಜಿ ಮಹಾರಾಜರ ಭಕ್ತರ ವಿರುದ್ಧ ರಮೇಶ ಜಾರಕಿಹೊಳಿ ನಡೆಯುತ್ತಿದ್ದಾರೆ ಎಂದು ಹೇಳಿದರು.

ಹಿಂದಿನ ಎಲ್ಲ ಶಾಸಕರೂ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಸ್ಥಾಪಿಸಬೇಕೆಂದು ಕನಸು ಕಂಡಿದ್ದರು. ಪ್ರಯತ್ನವನ್ನೂ ಮಾಡಿದ್ದರು. ಆದರೆ ದೈವೀ ಇಚ್ಛೆ ಲಕ್ಷ್ಮೀ ಹೆಬ್ಬಾಳಕರ್ ಅವರಿಂದ ಮಾಡಿಸಿದೆ. ಇಲ್ಲಿರುವ ಸಿದ್ದೇಶ್ವರ ಮಹಾರಾಜರ ಆಶಿರ್ವಾದದಿಂದ ಲಕ್ಷ್ಮೀ ಹೆಬ್ಬಾಳಕರ್ ಈ ಕೆಲಸವನ್ನು ಮಾಡಿದ್ದಾರೆ. ಎಲ್ಲರೂ ಪ್ರಯತ್ನ ಮಾಡಿದರೂ ಲಕ್ಷ್ಮೀ ಹೆಬ್ಬಾಳಕರ್ ಕಾಲದಲ್ಲಿ ಅದು ಆಗಿದೆ.

ಹೊಟ್ಟೆ ಕಿಚ್ಚಿಗೆ ಮದ್ದಿಲ್ಲ. ಲಕ್ಷ್ಮೀ ಹೆಬ್ಬಾಳಕರ್ ಬೆಳೆಯುತ್ತಿದ್ದಾರೆ.  ಲಕ್ಷ್ಮೀ ಹೆಬ್ಬಾಳಕರ್ ಜನರ ಮನಸ್ಸನ್ನು ಗೆಲ್ಲುತ್ತಿದ್ದಾರೆ ಎನ್ನುವ ಕಾರಣದಿಂದ ರಮೇಶ ಜಾರಕಿಹೊಳಿ ಸಮಸ್ತ ಶಿವಾಜಿ ಭಕ್ತರಿಗೆ ನೋವುಂಟು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಮಾರ್ಚ್ 5ರಂದು ರಮೇಶ ಜಾರಕಿಹೊಳಿ ಪ್ರತಿಭಟನೆ ಮಾಡುತ್ತಾರಂತೆ. ರಮೇಶ ಜಾರಕಿಹೊಳಿ ಅವರೆ ನೀವು ಬೆಂಕಿಯ ಜೊತೆ ಸರಸವಾಡುತ್ತಿದ್ದೀರಿ. ಸಮಸ್ತ ಶಿವಾಜಿ ಮಹಾರಾಜರ ಭಕ್ತರ ಭಾವನೆಯ ಜೊತೆಗೆ ಆಟವಾಡುತ್ತಿದ್ದೀರಿ. ಪ್ರತಿಭಟನೆ ಮಾಡುವುದಾಗಿ ಹಿರೇಬಾಗೇವಾಡಿಯಲ್ಲಿ ಕನ್ನಡದಲ್ಲಿ ಹೇಳಿದ್ದೀರಿ. ಅದು ಮುಗ್ದ ಮರಾಠಿ ಭಾಷಿಕರಿಗೆ ಅರ್ಥವಾಗಿಲ್ಲ. ಅರ್ಥವಾದರೆ ಅವರು ಸುಮ್ಮನಿರುವುದಿಲ್ಲ. ಶಿವಾಜಿ ಭಕ್ತರ ಮನಸ್ಸಿನ ಜೊತೆ ನೀವು ಆಟವಾಡುತ್ತಿದ್ದೀರಿ. ಜನರು ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದರು.

ಸರಕಾರದ ಕಾರ್ಯಕ್ರಮದಲ್ಲಿ ಪ್ರೋಟೋಕಾಲ್ ಉಲ್ಲಂಘನೆ ಮಾಡಲು ನಾವು ಮೂರ್ಖರಲ್ಲ. ನಾವೂ ವಯಕ್ತಿಕವಾಗಿ ಒಂದು ಕೋಟಿ ರೂ. ಖರ್ಚು ಮಾಡಿದ್ದೇವೆ. ಆದರೂ ನಾವೇನೂ ಪ್ರೋಟೋಕಾಲ್ ಉಲ್ಲಂಘನೆ ಮಾಡುತ್ತಿಲ್ಲ. ಪ್ರೋಟೋಕಾಲ್ ಬಗ್ಗೆ ಮಾತನಾಡುವ ಇವರು ಗೋಕಾಕದಲ್ಲಿ ಎಷ್ಟು ಬಾರಿ ಪ್ರೋಟೋಕಾಲ್ ಅನುಸರಿಸಿದ್ದೀರಿ?

ಎಷ್ಟು ಬಾರಿ ಮುಖ್ಯಮಂತ್ರಿಗಳನ್ನು ಕರೇದಿದ್ದೀರಿ? ಎಷ್ಟು ಬಾರಿ ಇಲಾಖೆ ಮಂತ್ರಿಗಳನ್ನು ಕರೆದಿದ್ದೀರಿ?  ನಿಮ್ಮದು ಅಲ್ಲಿ ಪಾಳೇಗಾರಿಕೆ, ನೀವು ನಡೆದಿದ್ದೇ ದಾರಿ. ನೀವು ಹೇಳಿದ್ದೇ ಶಾಸನ. ತಹಶೀಲ್ದಾರ ಕಚೇರಿ ನಿಮ್ಮ ಮನೆಯಲ್ಲಿ, ಸಬ್ ರಜಿಸ್ಟ್ರಾರಿ ಕಚೇರಿ ನಿಮ್ಮ ಮನೆಯಲ್ಲಿ. ಸಿಪಿಐ ನಿಮ್ಮ ಮನೆಗೆ ಬಂದು ಕೂಡ್ರಬೇಕು.

ಡಿಎಸ್ಪಿ ಅಂತೂ ಅತ್ತ ಹಾಯುವಂತಿಲ್ಲ. ಸಾಹುಕಾರ್ ಇದಾರಾ ಕೇಳಿ, ಅವರಿದ್ದರೆ ಅತ್ತ ದಿಕ್ಕಿನಲ್ಲೂ ಹಾಯುವಂತಿಲ್ಲ. ಇಷ್ಟೆಲ್ಲ ಪಾಳೆಗಾರಿಕೆ ಮಾಡಿಕೊಂಡು ಬಂದ ನೀವು ಯಾವ ಪ್ರೋಟೋಕಾಲ್ ಬಗ್ಗೆ ಮಾತನಾಡುತ್ತೀರಿ ಎಂದು ಪ್ರಶ್ನಿಸಿದರು.

ಗೋಕಾಕ ಕ್ಷೇತ್ರದಿಂದ ಲಕ್ಷ್ಮೀ ಹೆಬ್ಬಾಳಕರ್ ಸ್ಪರ್ಧಿಸುತ್ತಾರಾ ಎನ್ನುವ ಪ್ರಶ್ನೆಗೆ, ಅದು ಜನರ ಬಯಕೆ. ಗೋಕಾಕ ಕ್ಷೇತ್ರದ ಜನರು ಕಷ್ಟದಲ್ಲಿದ್ದಾರೆ. ಎಲ್ಲ ಇಲಾಖೆಗಳಿಂದಲೂ ತೊಂದರೆ ಅನುಭವಿಸುತ್ತಿದ್ದಾರೆ.  ಜನರ ಬಯಕೆ, ದೈವೀ ಇಚ್ಚೆ ಹೇಗಿರುತ್ತದೆ ನೋಡೋಣ ಎಂದರು.