ಉ.ಕ ಸುದ್ದಿಜಾಲ ಬೆಳಗಾವಿ :

ವಿಚಾರಣಾದೀನ ಕೈದಿಯೋರ್ವನ ಮೇಲೆ ಇತರ ಕೈದಿಗಳ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗಾಯಗೊಂಡ ಕೈದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಹಾರದ, ಸದ್ಯ ಬೆಳಗಾವಿ ರಾಮತೀರ್ಥ ನಗರದ ನಿವಾಸಿ ಹಿತೇಶಕುಮಾರ ಚವ್ಹಾಣ್ ಹಲ್ಲೆಗೊಳಗಾದ ಕೈದಿ. ಬೇರೆ ಪ್ರಕರಣದಲ್ಲಿ ಜೈಲಿನಲ್ಲಿರುವ ವಿಚಾರಣಾದೀನ ಕೈದಿಗಳಾದ ಬಸವರಾಜ ಹೊಳೆಪ್ಪ ದಡ್ಡಿ, ಬಸವಣ್ಣಿ ಸಿದ್ದಪ್ಪ ನಾಯ್ಕ, ಸವಿನಾ ಸಿದ್ದಪ್ಪ ದಡ್ಡಿ ಹಾಗೂ ಪ್ರದಾನಿ ಶೇಖರ ವಾಘಮೋಡೆ ಹಲ್ಲೆ ಮಾಡಿದ ಆರೋಪಿಗಳು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿತೇಶಕುಮಾರ ಚವ್ಹಾಣನನ್ನು ಬಂಧಿಸಲಾಗಿತ್ತು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹಿಂಡಲಗಾ ಜೈಲಿಗೆ ಆತನನ್ನು ಪೊಲೀಸರು ರವಾನಿಸಿದ್ದರು.

ಅದೇ ದಿನ ಸಂಜೆ ಕಾರಾಗೃಹದ ಕ್ಯಾಂಟೀನ್ ಮುಂದೆ ಹೋಗುತ್ತಿದ್ದ ವೇಳೆ ಕೈದಿಗಳು ಹಲ್ಲೆ ಮಾಡಿ, ಮಾರಣಾಂತಿಕವಾಗಿ ಗಾಯಗೊಳಿಸಿದ್ದಾರೆ. ಘಟನೆಯಲ್ಲಿ, ಹಿತೇಶಕುಮಾರನಿಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಹಿನ್ನೆಲೆ: ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊನಗಾ ಕೈಗಾರಿಕಾ ಪ್ರದೇಶದಲ್ಲಿನ ವಿನಾಯಕ ಸ್ಟೀಲ್ ಆ್ಯಂಡ್ ರೋಲಿಂಗ್ ಫ್ಯಾಕ್ಟರಿಯ ವ್ಯವಸ್ಥಾಪಕನಾದ ಹಿತೇಶಕುಮಾರ ಚವ್ಹಾಣ್ ಹಾಗೂ ಅಯೂಬಖಾನ್ ಪಠಾಣ ಎಂಬವರ ನಡುವೆ ಹಣಕಾಸಿನ ವಿಚಾರಕ್ಕೆ ಸೆ.30ರಂದು ಗಲಾಟೆ ನಡೆದಿತ್ತು.

ಈ ವ್ಯವಹಾರಕ್ಕೆ ಮುತ್ಯಾನಟ್ಟಿ ಗ್ರಾಮದ ಲಕ್ಷ್ಮಣ ದಡ್ಡಿ ಮಧ್ಯಸ್ಥಿಕೆ ವಹಿಸಲು ಹೋಗಿದ್ದ. ಈ ವೇಳೆ ಹಿತೇಶಕುಮಾರ ಹಾಗೂ ಲಕ್ಷ್ಮಣ ದಡ್ಡಿ ಮಧ್ಯೆ ಮಾತಿಗೆ ಮಾತು ಬೆಳೆದು, ಪರಸ್ಪರ ಹೊಡೆದಾಡಿಕೊಂಡಿದ್ದರು ಎಂದು ಪೊಲೀಸ್​ ಮೂಲಗಳಿಂದ ತಿಳಿದುಬಂದಿದೆ.

ಗಲಾಟೆಯಲ್ಲಿ ಲಕ್ಷ್ಮಣ ದಡ್ಡಿ ಮತ್ತು ಆತನೊಂದಿಗೆ ಬಂದಿದ್ದ ದಿಲೀಪ್ ಕಮಜಗಿ ತೀವ್ರವಾಗಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಕಾಕತಿ ಪೊಲೀಸರು ಹಿತೇಶಕುಮಾರನನ್ನು ಬಂಧಿಸಿ, ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದರು.

ಆದರೆ ಬೇರೆ ಪ್ರಕರಣದಲ್ಲಿ ಬಂಧಿಯಾಗಿದ್ದ ಲಕ್ಷ್ಮಣ ದಡ್ಡಿ ಸಂಬಂಧಿಕರಾದ ವಿಚಾರಣಾದೀನ ಕೈದಿಗಳಿಗೆ ಈ ವಿಷಯ ಗೊತ್ತಾಗಿದೆ. ಇದರಿಂದ ಆಕ್ರೋಶಗೊಂಡಿದ್ದ ಬಸವರಾಜ ಹೊಳೆಪ್ಪ ದಡ್ಡಿ, ಬಸವಣ್ಣಿ ಸಿದ್ದಪ್ಪ ನಾಯ್ಕ, ಸವಿನಾ ಸಿದ್ದಪ್ಪ ದಡ್ಡಿ ಹಾಗೂ ಶೇಖರ ವಾಘಮೋಡೆ ಸೇರಿಕೊಂಡು ಜೈಲಿನಲ್ಲಿಯೇ ಹಿತೇಶಕುಮಾರನನ್ನು ಮನಬಂದಂತೆ ಥಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹಿಂಡಲಗಾ ಕೇಂದ್ರ ಕಾರಾಗೃಹದ ಪ್ರಭಾರಿ ಅಧೀಕ್ಷಕ ಎಂ.ಕೊಟ್ರೇಶ್ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗ್ರಾಮೀಣ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.