ಉ.ಕ ಸುದ್ದಿಜಾಲ ಬೆಳಗಾವಿ :

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗಳನ್ನು ಬಿಜೆಪಿ ಸರ್ಕಾರ ಅಧೋಗತಿಗೆ ತಂದಿತ್ತು. ಸಮರ್ಪಕ ನಿರ್ವಹಣೆಯಿಲ್ಲದೆ ಅವು ಮುಚ್ಚುವ ಹಂತದಲ್ಲಿದ್ದವು.

ರಾಜ್ಯದಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್‌ಗಳನ್ನು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಆರಂಭಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ತಿಳಿಸಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರು, ಕಾರ್ಮಿಕರ ಪಾಲಿಗೆ ವರದಾನವಾದ ಈ ಕ್ಯಾಂಟೀನ್‌ಗಳಿಗೆ ಉತ್ತೇಜನ ನೀಡುತ್ತೇವೆ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಎಲ್ಲ ಕ್ಯಾಂಟೀನ್‌ಗಳ ಪುನಶ್ಚೇತನಕ್ಕೆ 240 ಕೋಟಿ ಖರ್ಚು ಮಾಡುತ್ತಿದ್ದೇವೆ. ಯಾವ ಪ್ರದೇಶದಲ್ಲಿ ಯಾವ ಊಟ ಇಷ್ಟವೋ ಅದನ್ನೇ ನೀಡಲು ಸೂಚಿಸಲಾಗಿದೆ. ಬೆಳಗಾವಿ ಭಾಗದಲ್ಲಿ ರೊಟ್ಟಿ ಊಟ, ಮೈಸೂರು ಭಾಗದಲ್ಲಿ ರಾಗಿ ಮುದ್ದೆ, ಬೆಂಗಳೂರಿನಲ್ಲಿ ಅನ್ನ, ಇಡ್ಲಿ ಹೀಗೆ ಆಯಾ ಪ್ರದೇಶದ ಆಹಾರ ಕೊಡಲಾಗುವುದು ಎಂದರು.

ಪೌರಕಾರ್ಮಿಕರನ್ನು ಕಾಯಂಗೊಳಿಸಿ ಆದೇಶ ಪತ್ರಗಳನ್ನು ಈಗಾಗಲೇ ನಾನು ಮತ್ತು ಸಚಿವ ರಹೀಂಖಾನ್ ವಿತರಿಸುತ್ತಿದ್ದೇವೆ. ಅಗತ್ಯವಿರುವ ಕಡೆ ಕಾರ್ಮಿಕರ ನೇಮಕಾತಿಯು ನಡೆದಿದೆ ಎಂದರು.