ಉ.ಕ ಸುದ್ದಿಜಾಲ ಬೆಳಗಾವಿ :
ಉದ್ಯಮಿಗಳು ಎಂದು ಹೇಳಿಕೊಂಡ ಆರೋಪಿಗಳು ಟೆಲಿಗ್ರಾಮ್’ ಆ್ಯಪ್‌ನಲ್ಲಿ ಗ್ರೂಪ್ ಸಿದ್ಧಪಡಿಸಿದ್ದರು. ಉದ್ಯಮದಲ್ಲಿ ಹಣ ಹೂಡಿಕೆ ಮಾಡಿದರೆ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ನೀಡುವುದಾಗಿ ನಂಬಿಸಿ ಟೆಲಿಗ್ರಾಮ್ ಆ್ಯಪ್ ಬಳಸಿ ಮಹಿಳೆಯರಿಂದ ಹಣ ವಂಚನೆ ಮಾಡಿದ್ದ ಪ್ರಕರಣವನ್ನು ಜಿಲ್ಲಾ ಸಿಇಎನ್ ಠಾಣೆ ಪೊಲೀಸರು ಭೇದಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗದ ಡಾ.ಶಿಲ್ಪಾ ಜೀವಪ್ಪ ಶಿರಗಣ್ಣವರ ಹಾಗೂ ನಿಪ್ಪಾಣಿಯ ಆಶಾ ಅಶೋಕ ಕೋಟಿವಾಲೆ ವಂಚನೆಗೆ ಒಳಗಾದವರು. ವಂಚನೆಗೆ ಒಳಗಾಗಿದ್ದ ಇಬ್ಬರು ಮಹಿಳೆಯರಿಗೆ ₹46.15 ಲಕ್ಷ ಹಣ ಮರಳಿಸಿದ್ದಾರೆ. ಇಬ್ಬರೂ ಮಹಿಳೆಯರು ಮೊದಲು ಸಣ್ಣ ಪ್ರಮಾಣದ ಹಣ ಹೂಡಿಕೆ ಮಾಡಿದ್ದರು. ಮೊದಲ ನಾಲ್ಕು ಬಾರಿ ಅವರಿಗೆ ಉತ್ತಮ ಲಾಭಾಂಶದ ಪಾಲನ್ನು ನೀಡಲಾಗಿತ್ತು.
ನಂತರ ಡಾ.ಶಿಲ್ಪಾ ಅವರು ಆಗಸ್ಟ್ 4 ರಿಂದ ಆಗಸ್ಟ್ 17ರವರೆಗೆ ಹಂತಹಂತವಾಗಿ ಒಟ್ಟು ₹27.74 ಲಕ್ಷ ಹೂಡಿಕೆ ಮಾಡಿದ್ದರು. ಆಶಾ ಕೂಡ ಆಗಸ್ಟ್ 25ರಿಂದ ಆಗಸ್ಟ್ 28ರವರೆಗೆ ಒಟ್ಟು ₹18.41 ಲಕ್ಷ ಹೂಡಿಕೆ ಮಾಡಿದ್ದರು. ದೊಡ್ಡ ಮೊತ್ತದ ಹಣ ಅಕೌಂಟಿಗೆ ಬಂದ ತಕ್ಷಣ ವಂಚಕರು ಅಕೌಂಟ್ ‘ಫ್ರೀಜ್’ ಮಾಡಿದ್ದರು.
ಮಹಿಳೆಯರು ಜಿಲ್ಲಾ ಸಿಇಎನ್ ಠಾಣೆಗೆ ಈಚೆಗೆ ದೂರು ದಾಖಲಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳ ಜಾಲ ಪತ್ತೆ ಮಾಡುವಲ್ಲಿ ಯಶಸ್ವಿಯಾದರು.
ಆನ್‌ಲೈನ್ ವಂಚಕರ ತಂಡವು ಬೇನಾಮಿ ಹೆಸರುಗಳಲ್ಲಿ 21 ಬ್ಯಾಂಕ್ ಖಾತೆಗಳನ್ನು ತೆರೆದಿತ್ತು. ಅದರಲ್ಲಿ ₹72.57 ಲಕ್ಷ ಹಣ ಫ್ರೀಜ್ ಮಾಡಲಾಗಿತ್ತು. ಹಲವು ಮಹಿಳೆಯರಿಗೆ ಲಾಭಾಂಶದ ಆಮಿಷವೊಡ್ಡಿ ವಂಚಿಸಿದ್ದಾರೆ.
ಡಾ.ಶಿಲ್ಪಾ ಹಾಗೂ ಆಶಾ ಅವರು ಕಳೆದುಕೊಂಡಿದ್ದ ಹಣವನ್ನು ಅವರಿಗೆ ಮರಳಿಸಲಾಗಿದೆ ಎಂದು ಜಿಲ್ಲಾ ಸಿಇಎನ್ ಠಾಣೆಯ ಇನ್‌ಸ್ಪೆಕ್ಟರ್ ಬಿ.ಆರ್.ಗಡ್ಡೇಕರ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ವಂಚಕರು ಟೆಲಿಗ್ರಾಂ ಆ್ಯಪ್ ಮೂಲಕ ಹೂಡಿಕೆ, ಆನ್‌ಲೈನ್ ಮಾರ್ಕೆಟ್, ಪಾರ್ಟ್‌ಟೈಮ್ ಕೆಲಸದ ಆಮಿಷವೊಡ್ಡಿ ವಂಚನೆ ಮಾಡುವ ಜಾಲಗಳು ಹೆಚ್ಚಾಗಿವೆ. ಇಂಥವರ ಬಗ್ಗೆ ಜನ ಎಚ್ಚರಿಕೆಯಿಂದ ಇರಬೇಕು. ವಂಚನೆಗೆ ಒಳಗಾದ ತಕ್ಷಣ ಸಂಬಂಧಿಸಿದ ಠಾಣೆಗೆ ದೂರು ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.