ಉ‌.ಕ ಸುದ್ದಿಜಾಲ ಬೆಂಗಳೂರು :

ಬೆಂಗಳೂರಿನ ಕೆ ಆರ್ ಪುರಂ ರೈಲು ನಿಲ್ದಾಣ ಸಮೀಪ ನಿನ್ನೆ ರಾತ್ರಿ 1.30 ಗಂಟೆ ಸಮಯದಲ್ಲಿ ಪೈಶಾಚಿಕ ಕೃತ್ಯವೊಂದು ನಡೆದಿದೆ. ಅಣ್ಣನ ಜೊತೆ ಹೊರಟಿದ್ದ ತಂಗಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ನಡೆಸಲಾಗಿದೆ.

ಬಿಹಾರದ ಮೂಲದ ಯುವತಿಯ ಮೇಲೆ ಈ ದೌರ್ಜನ್ಯ ನಡೆದಿದೆ ಎಂದು ತಿಳಿದು ಬಂದಿದೆ. ಅಕ್ಕ ಬಾವನ ಜೊತೆಗೆ ಕೆಲಸಕ್ಕೆಂದು ಕೇರಳಕ್ಕೆ ಹೋಗಿದ್ದಳು ಯುವತಿ, ನಂತರ ಕೆಲಸ ಬಿಟ್ಟು ಊರಿಗೆ ವಾಪಸ್‌ ಹೊರಟಿದ್ದಳಂತೆ. ಎರ್ನಾಕುಲಂನಿಂದ ಬೆಂಗಳೂರಿನಗೆ ಬಂದು ಹೋಗಲು ನಿರ್ಧಾರ ಮಾಡಿದ್ದ ಯುವತಿ, ಬೆಂಗಳೂರಿನಲ್ಲಿರುವ ತನ್ನ ದೊಡ್ಡಮ್ಮನ ಮಗನಿಗೆ ಕರೆ ಮಾಡಿ ನಗರಕ್ಕೆ ಬರುತ್ತಿರುವುದಾಗಿ ತಿಳಿಸಿದ್ದಳು.

ಈ ವೇಳೆ ಕೆ.ಆ‌ರ್.ಪುರ ರೈಲು ನಿಲ್ದಾಣದಲ್ಲಿ ಇಳಿಯಲು ದೊಡ್ಡಮ್ಮನ ಮಗ ಹೇಳಿದ್ದಾರೆ. ರಾತ್ರಿ 1.30ರ ಸುಮಾರಿಗೆ ಯುವತಿ ಕೆ.ಆರ್.ಪುರಂಗೆ ಬಂದು ಇಳಿದಿದ್ದಾಳೆ. ಅವಳನ್ನು ಊಟಕ್ಕೆ ಕರೆದುಕೊಂಡು ಹೋಗುವ ವಿಚಾರದಲ್ಲಿ ಮಹದೇವಪುರಕ್ಕೆ ಆಕೆಯ ಅಣ್ಣ ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದನಂತೆ.

ಹೀಗೆ ಅಣ್ಣ ತಂಗಿ ಇಬ್ಬರು ಹೋಗುತ್ತಿರುವಾಗ ದಿಢೀರನೆ ಇಬ್ಬರು ಅಪರಿಚಿತ ಯುವಕರು ಎಂಟ್ರಿ ಕೊಟ್ಟಿದ್ದಾರೆ. ಯುವತಿ ಅಣ್ಣನ ಮೇಲೆ ಹಲ್ಲೆ ನಡೆಸಿ ಆತನನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾನೆ ಓರ್ವ ಆಸಾಮಿ. ಮತ್ತೋರ್ವ ಯುವಕ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪ ಮಾಡಲಾಗಿದೆ.

ಯುವತಿಯ ಕಿರುಚಾಟ ಕೇಳಿ ಸ್ಥಳಕ್ಕೆ ಜನರು ಓಡಿ ಬಂದಿದ್ದಾರೆ. ನಂತರ ಬೀದಿ ಕಾಮುಕರನ್ನು ಹಿಡಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆ ನಡೆಸಿ ಆಶಿಫ್ ಹಾಗೂ ಮತ್ತೊರ್ವ ಆರೋಪಿಯನ್ನು ಬಂಧಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಮಹದೇವಪುರ ಠಾಣೆ ಪೊಲೀಸರು ತನಿಖೆಯನ್ನು ಕೈಗೊಂಡಿದ್ದರು.