ಉ.ಕ ಸುದ್ದಿಜಾಲ ಬೆಳಗಾವಿ :
ಮಲತಂದೆ ಮತ್ತು ಆತನ ಸ್ನೇಹಿತರು ಸೇರಿ ಮೂರು ವರ್ಷದ ಬಾಲಕನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಸವದತ್ತಿ ತಾಲೂಕಿನ ಹಾರೂಗೊಪ್ಪ ಗ್ರಾಮದ ಬಳಿ ನಿನ್ನೆ ರಾತ್ರಿ ನಡೆದಿದೆ. ಬಿಹಾರ ಮೂಲದ ಕಾರ್ತಿಕ್ ಮುಖೇಶ್ ಮಾಂಜಿ(3) ಕೊಲೆಯಾದ ಬಾಲಕ.
ಆತನ ಮಲತಂದೆ ಮಹೇಶ್ವರ ಮಾಂಜಿ ಕೊಲೆ ಮಾಡಿದ ಆರೋಪಿ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ಮುರಗೋಡ ಸಿಪಿಐ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ ಅವರು ಮಾತನಾಡಿ, “ಇದು ಹೃದಯ ವಿದ್ರಾವಕ ಘಟನೆ. ಮೂರು ವರ್ಷದ ಬಾಲಕನನ್ನು ಮಲ ತಂದೆ ಮತ್ತು ಆತನ ಸಂಗಡಿಗರು ಅಮಾನುಷವಾಗಿ ಕೊಲೆ ಮಾಡಿದ್ದಾರೆ.
ಬಾಲಕನ ತಾಯಿ ರಂಗೀಲಾ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಕೊಲೆಯಾದ ಬಾಲಕನ ಮಲತಂದೆ ಮಹೇಶ್ವರ ಮಾಂಜಿ ಮತ್ತು ಆತನ ಸ್ನೇಹಿತರಾದ ರಾಕೇಶ ಮಾಂಜಿ, ಶಿವನಾಥ ಮಾಂಜಿ, ಮಹೇಶ ಮಾಂಜಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದೇವೆ ಎಂದರು.
ಮೊದಲ ಗಂಡನನ್ನು ಬಿಟ್ಟಿದ್ದ ರಂಗೀಲಾ ಆರೋಪಿ ಮಹೇಶ್ ಮಾಂಜಿ ಜೊತೆಗೆ ಎರಡನೇ ಮದುವೆ ಆಗಿದ್ದಳು. ಬಿಹಾರ ಮೂಲದ ಕಾರ್ಮಿಕರು ಹಾರೂಗೊಪ್ಪ ಬಳಿ ಇರುವ ಜಿನ್ನಿಂಗ್ ಮಿಲ್ನಲ್ಲಿ ಕೆಲಸ ಮಾಡುತ್ತಿದ್ದರು. ಇವರು ಮಿಲ್ ಸಮೀಪದ ಶೆಡ್ನಲ್ಲೇ ಇದ್ದರು.
ಹೀಗೆ ಇರುವಾಗ ನಿನ್ನೆ ರಂಗೀಲಾ ಜೊತೆಗೆ ಮಹೇಶ್ವರ್ ಜಗಳ ತೆಗೆದಿದ್ದಾನೆ. ಆ ಬಾಲಕನನ್ನು ನೀನು ಯಾಕೆ ಕರೆದುಕೊಂಡು ಬಂದೆ ಎಂದು ಹಲ್ಲೆ ಮಾಡಲು ಯತ್ನಿಸಿದ್ದಾನೆ” ಎಂದು ತಿಳಿಸಿದರು. ಅದೇ ಸಮಯದಲ್ಲಿ ಆತನ ಮೂವರು ಸ್ನೇಹಿತರು ಬಂದಿದ್ದಾರೆ. ಆ ಬಾಲಕನನ್ನು ಕರೆದುಕೊಂಡು ಬರಬೇಡ ಅಂತಾ ಹೇಳಿದರೂ ಕರೆದುಕೊಂಡು ಬಂದಿದ್ದಾಳೆ.
ಹಾಗಾಗಿ, ಈಕೆಗೆ ಪಾಠ ಕಲಿಸಬೇಕು ಅಂತಾ ಮಹೇಶ್ ಆತನ ಸ್ನೇಹಿತರಿಗೆ ಹೇಳಿದ್ದಾನೆ. ಬಳಿಕ ಎಲ್ಲರೂ ಕೂಡಿಕೊಂಡು ಆಕೆಯ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಆಗ ಭಯದಿಂದ ರಂಗೀಲಾ ಅಲ್ಲಿಂದ ಓಡಿ ಹೋಗಿದ್ದಾಳೆ. ಆದರೆ, ಆ ಬಾಲಕ ಅಲ್ಲಿಯೇ ಇದ್ದ. ಆ ವೇಳೆ ಬಾಲಕನ ತಲೆಗೆ ಕಟ್ಟಿಗೆಯಿಂದ ಅವರೆಲ್ಲಾ ಹೊಡೆದಿದ್ದಾರೆ ಎಂದು ವಿವರಿಸಿದರು.
ಒಲೆಯಲ್ಲಿದ್ದ ಕಟ್ಟಿಗೆಯಿಂದ ಆ ಬಾಲಕನ ಹಣೆ, ತಲೆ, ತೊಡೆ, ಎದೆ ಭಾಗದಲ್ಲಿ ಸುಟ್ಟಿದ್ದಾರೆ. ಗಂಭೀರವಾಗಿ ಹಲ್ಲೆಗೊಳಗಾದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ವಲ್ಪ ಹೊತ್ತು ಬಿಟ್ಟ ಮೇಲೆ ರಂಗೀಲಾ ಮನೆಗೆ ಬಂದು ನೋಡಿದಾಗ ಬಾಲಕ ಕೊನೆಯುಸಿರೆಳೆದಿದ್ದ. ರಂಗೀಲಾ ಸ್ಥಳೀಯರೊಂದಿಗೆ ಮುರುಗೋಡ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ ಎಂದು ಮಾಹಿತಿ ನೀಡಿದರು.