ಉ.ಕ ಸುದ್ದಿಜಾಲ ಚಿಕ್ಕೋಡಿ :

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋತಿರುವ ಶಶಿಕಲಾ ಜೊಲ್ಲೆ ಅವರ ರಾಜಕೀಯ ಒತ್ತಡಕ್ಕೆ ಮಣಿದು ಸದಲಗಾ ಪೊಲೀಸರು ವಿನಾಕಾರಣ ನಮ್ಮ ಮಕ್ಕಳನ್ನು ಅರೆಸ್ಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸದಲಗಾ ಪೊಲೀಸ್ ಠಾಣೆ ಎದುರು ಬೋರಗಾಂವ್ ಪಟ್ಟಣ ಪಂಚಾಯತಿ ಸದಸ್ಯರು ಉತ್ತಮ ಪಾಟೀಲ ಬೆಂಬಲಿಗರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು‌.

ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ‌ ಬೆಂಬಲಿಗ ಉತ್ತಮ ಪಾಟೀಲ್ ನೇತೃತ್ವದಲ್ಲಿ ಬೋರಗಾಂವ್ ಪಟ್ಟಣ ಪಂಚಾಯತಿಯಲ್ಲಿ ಎಲ್ಲ ಸ್ಥಾನಗಳಲ್ಲೂ ಉತ್ತಮ ಪಾಟೀಲ ಬೆಂಬಲಿಗರು ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಗೆಲುವಿನ ಸಂಭ್ರಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಉತ್ತಮ ಪಾಟೀಲ ಬೆಂಬಲಿಗರ ನಡುವೆ ಗಲಾಟೆ ಆಗಿತ್ತು.

ಗಲಾಟೆಯಲ್ಲಿ ಉತ್ತಮ ಪಾಟೀಲ 9ಬೆಂಬಲಿಗರ ಮೇಲೆ ಸದಲಗಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.ಬಳಿಕ ಉತ್ತಮ ಪಾಟೀಲ ಅವರು ಹೈಕೋರ್ಟ್ ಬೇಲ್ ತೆಗೆದುಕೊಂಡು ಬಂದು ಬಿಡುಗಡೆ ಮಾಡಿಸಿದ್ದರು. ಆದ್ರೆ, ಅಷ್ಟಕ್ಕೇ  ಸುಮ್ಮನಾಗದ ಸದಲಗಾ ಪೊಲೀಸರು ಶಶಿಕಲಾ ಜೊಲ್ಲೆ ಅವರ ರಾಜಕೀಯ ಒತ್ತಡಕ್ಕೆ ಮಣಿದು ನಮ್ಮ ಮಕ್ಕಳಿಗೆ ವಿನಾಕಾರಣ ಕಿರುಕುಳ ಕೊಡುವುದಲ್ಲದೇ ಬಂಧಿಸಿ ಕೇಸ್ ಹಾಕುತ್ತಿದ್ದಾರೆ ಎಂಬುವುದು ಗೆದ್ದ ಪಕ್ಷೇತರ ಅಭ್ಯರ್ಥಿಗಳ  ಆರೋಪವಾಗಿದೆ.

ಈಗಾಗಲೇ 9 ಜನರ ವಿರುದ್ಧ ಸದಲಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ‌. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೆ ಐವರನ್ನು ರಾತೋರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು‌. ಈ ವೇಳೆ‌ ಮಾತನಾಡಿದ ಪ್ರಕಾಶ ಹುಕ್ಕೇರಿ,ಚುನಾವಣೆಗಳಲ್ಲಿ ಗಲಾಟೆ ಗದ್ದಲಗಳು ಸ್ವಾಭಾವಿಕ.

ಇಂತಹ ಪ್ರಕರಣದಲ್ಲಿ ರಾಜಕೀಯ ನಾಯಕರು ಅಷ್ಟೊಂದು ಮಹತ್ವ ಕೊಡಬಾರದು. ಕಾರ್ಯಕರ್ತರು ದಿನ ಬೆಳಗಾದರೆ ಒಬ್ಬರ ಮುಖ ಮತ್ತೊಬ್ಬರು ನೋಡುತ್ತಾರೆ.ಹೀಗಾಗಿ ಅದನ್ನು ಸಚಿವರು ಗಂಭೀರವಾಗಿ ತೆಗೆದುಕೊಳ್ಳಬಾರದು. ಇದುದುರಷ್ಟಕರ ಬೆಳವಣಿಗೆ. ಚುನಾವಣೆಯಲ್ಲಿ ವಿರೋಧ ಮಾಡಿದ್ದೇವೆ ಅಂತಾ ರೈತರ ಕಬ್ಬು ತೆಗೆದುಕೊಂಡು ಹೋಗುವುದನ್ನು ನಿಲ್ಲಿಸೋದು, ಕೆಲಸದಿಂದ ತೆಗೆಯೋದು ಈ ಪದ್ಧತಿ ಚಲೋ ಅಲ್ಲಾ.ಈ ಬಗ್ಗೆ ಅವರಿಗೆ ಅರಿವು ಆಗಬೇಕಿದೆ.

ಆದ್ರೆ, ಈ ವಿಷಯವನ್ನು ನಾವು ಗಂಭೀರವಾಗಿ ತೆಗದುಕೊಳ್ಳುತ್ತೇವೆ. ಬೆಂಬಲಿಗರ ಜೊತೆಗೆ ಇರ್ತೇವೆ. ಬಿಜೆಪಿ ಪಕ್ಷಕ್ಕೆ ಅವರು ಸಚಿವರಿರಬಹುದು.ಕಾಂಗ್ರೆಸ್ ಪಕ್ಷಕ್ಕೆ ಅಲ್ಲಾ. ಮುಂಬರುವ ದಿನಗಳಲ್ಲಿ ಒಗ್ಗಟ್ಟಾಗಿ ನಿಪ್ಪಾಣಿ ಕೇತ್ರದಲ್ಲಿ ಕೆಲಸ ಮಾಡುವ ಮೂಲಕ ಅವರಿಗೆ ಬುದ್ಧಿ ಕಲಿಸುವ ಕೆಲಸವನ್ನು ಮಾಡುತ್ತೇವೆ ಎಂದರು.