ಉ.ಕ ಸುದ್ದಿಜಾಲ ರಾಯಬಾಗ :

ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ಅತ್ಯಂತ ಪ್ರಭಾವಿ ಶಕ್ತಿ ದೇವತೆ ಎಂದು ಸುಪ್ರಸಿದ್ದವಾದ ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಸುಕ್ಷೇತ್ರ ಚಿಂಚಲಿ ಮಾಯಾಕ್ಕಾ ದೇವಿಯ ಜಾತ್ರೆಯು ಪ್ರತಿ ವರ್ಷ ಭಾತರ ಹುಣ್ಣಿಮೆಯ ನಂತರ ಬರುವ ಹಸ್ತಾ ನಕ್ಷತ್ರದ ಶುಭಗಳಿಗೆಯಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ.

ಈ ಜಾತ್ರೆಯು ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ಜಾತ್ರೆ ಜಾತ್ರೆಯು ಫೆಬ್ರುವರಿ 05 ಪ್ರಾರಂಭವಾಗಿ ಒಂದು ತಿಂಗಳ ವರೆಗೆ ಜರಗುತ್ತದೆ ಇಂದು ಹಸ್ತಾ ನಕ್ಷತ್ರದಂದು ದೇವಿಯ ಮಹಾನೈವೇದ್ಯ ಹಾಗೂ ದೇವಿಯ ಪಾಲಕಿ ಉತ್ಸವ ಜರುಗುವುದು  ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಅಲ್ಲದೆ ಗೋವಾ, ದೆಹಲಿ, ಆಂಧ್ರ, ತಮಿಳುನಾಡು, ಕೊಂಕಣ, ಮಹಾರಾಷ್ಟ್ರಗಳಿಂದ ಸುಮಾರು 50ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದು ತಮ್ಮ ವಿವಿಧ ಹರಕೆಗಳನ್ನು ತೀರಿಸುತ್ತಾರೆ.

ಕೃಷ್ಣಾನದಿಯ ದಡದ ಮೇಲಿದ್ದು ರಾಯಬಾಗದಿಂದ ಉತ್ತರಕ್ಕೆ 8 ಕಿ.ಮೀ ಅಂತರದಲ್ಲಿದೆ. ಬೆಳಗಾವಿಯಿಂದ 120 ಕಿ.ಮೀ. ದೂರದಲ್ಲಿದೆ. ಮಾಯಾಕ್ಕಾ ದೇವಿಯ ಕಾರಣದಿಂದ ಗ್ರಾಮಕ್ಕೆ ಮಾಯಾಕ್ಕಾ ಚಿಂಚಲಿ ಎಂದು ಸುಪ್ರಸಿದ್ಧ ಹೆಸರು ಬಂದಿದೆ. ದೇವಿಯ ಭಕ್ತರು ವ್ಯಾಪ್ತಿ ವಿಶಿಷ್ಟ ಒಟ್ಟು ಭಕ್ತರ ವ್ಯಾಪ್ತಿಯಲ್ಲಿ ಶೇ. 75% ರಷ್ಟು ಕೊಂಕಣ ಹಾಗೂ ಮಹಾರಾಷ್ಟ್ರದವರು ಉಳಿದ ಶೇ. 25% ರಷ್ಟು ಭಕ್ತರು ರಾಜ್ಯದವರು ಪ್ರತಿ ಸಲ ಜಾತ್ರೆಗೆ 4 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುತ್ತಾರೆ. ಮಾಯಾಕ್ಕಾ ದೇವಿಗೆ ಎಲ್ಲಾ ಕೋಮಿನ ಹಾಗೂ ಜಾತಿಯ ಭಕ್ತರು ಇದ್ದಾರೆ.

ದೇವಿಗೆ ಸಂಬಂಧಿಸಿದಂತೆ ಅವಳನ್ನು ಶಕ್ತಿ ದೇವತೆ ಎಂದೂ ಪಾರ್ವತಿಯ ಅವತಾರ ಎಂತಲೂ ಭಕ್ತರು ನಂಬಿದ್ದಾರೆ. ದೇವಿಯ ಮೂಲ ಸ್ಥಳ ಚಿಂಚಲಿಗೆ ಬಂದ್ದಿದ್ದು ಇತ್ಯಾದಿಗಳ ಬಗ್ಗೆ ಪಾರಂಪರಿಕ ಹೇಳಿಕೆಗಳಿವೆ, ಮಾಯಾಕ್ಕ ದೇವಿಯು ಮಹಾರಾಷ್ಟ್ರದ ಮಾನ ದೇಶ ಕೊಂಕಣದಿಂದ ಬಂದವಳು ಎಂದು ಹಿರಿಯರು ಹೇಳುತ್ತಾರೆ. ಕೀಲ-ಕಿಟ್ಟ ಎಂಬ ರಾಕ್ಷಸರನ್ನು ಬೆನ್ನಟ್ಟಿಕೊಂಡು ಬಂದು ಚಿಂಚಲಿಯಲ್ಲಿ ರಾಕ್ಷಸರನ್ನು ಸಂಹಾರ ಮಾಡಿ ಇಲ್ಲಿಯೇ ನಲೆ ನಿಂತಳು ಎಂದು ಐತಿಹಾಸಿಕ ಕತೆಗಳು ಸಾಕ್ಷಿಯಾಗಿವೆ.

ಮಾಯಾಕ್ಕಾ ದೇವಿಯ ದೇವಸ್ಥಾನ ಚಾಲುಕ್ಯ ಶೈಲಿಯಲ್ಲಿದೆ. ಪ್ರವೇಶ ದ್ವಾರ ಪೂರ್ವಭಿಮುಖವಾಗಿದೆ. ದೇವಿಯ ಮೂರ್ತಿ ಪಶ್ಚಿಮಕ್ಕೆ ಮುಖ ಮಾಡಿದೆ. ಪೂರ್ವಕ್ಕೆ ಮುಖವಿರುವ ಮಹಾದ್ವಾರವು ಸುಮಾರು 50 ಅಡಿ ಎತ್ತರವಿದ್ದು ಮಧ್ಯದಲ್ಲಿ ನಗಾರಿಕಾನೆ ಇದೆ. ದೇವಸ್ಥಾನವು ವಿಶಾಲ ಆವರಣ ಹೊಂದಿದ್ದು ಬಿಳಿಯ ಕಲ್ಲಿನಲ್ಲಿ ನಿರ್ಮಾಸಲಾಗಿದೆ ಗೋಪುರ ಅತ್ಯಂತ ಆಕರ್ಷಕವಾಗಿದೆ. ಅದರಲ್ಲಿ ವಿವಿಧ ಹಿಂದು ದೇವತೆಗಳನ್ನು ನಿರ್ಮಿಸಲಾಗಿದೆ.

ದೇವಿಯ ಮೂರ್ತಿ ಆಕರ್ಷಕವಾಗಿದ್ದು ತಲೆಯ ಮೇಲೆ ಐದು ಹೆಡೆಯ ಸರ್ಪ, ನಾಳ್ಕೂ ಕೈ ತುಂಬಾ ಹಸಿರು ಬಳೆಗಳು, ಮೈ ತುಂಬಾ ಚಿನ್ನದ ಒಡೆವೆಗಳು, ಬಲಗೈಯಲ್ಲಿ ಖಡ್ಗ ಇನ್ನೊಂದು ಕೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಹಾವು ಇದೆ. ಆದ್ದರಿಂದ ದೇವಿಯನ್ನು ಮಾಯಾವ್ವ, ಮಾಯಕಾರತಿ, ಮಹಾಕಾಳಿ, ಮಾಯಿ ಎಂದೆಲ್ಲ ಕರೆಯುತ್ತಾರೆ.

ಹಿರಿಯರ ಪ್ರಕಾರ ಚಿಂಚಲಿಯಲ್ಲಿ “ಹಿರಿದೇವಿ” ಮೂಲದೇವತೆ ಇವಳೇ ಗ್ರಾಮ ದೇವತೆ ಮಾಯಾಕ್ಕಾ ದೇವಿ ಹಿರಿ ದೇವಿಯಲ್ಲಿ ಆಶ್ರಯ ಪಡೆದು ಇಲ್ಲಿ ನೆಲೆಸಿದ್ದು ಅದಕ್ಕಾಗಿ ಮೊದಲ ಪ್ರಾಶಸ್ತ್ಯ ಹಿರಿಯದೇವಿಗೆ ಈಗಲೂ ಮೊದಲು ಹಿರಿ ದೇವಿಯ ದರ್ಶನ ಪಡೆದು ನೈವೇದ್ಯ ಸಲ್ಲಿಸಿದ ನಂತರ ಮಾಯಾಕ್ಕಾ ದೇವಿಗೆ ನೈವೇದ್ಯ ಸಲ್ಲುತ್ತದೆ.

ಜಾತ್ರಾ ಸಮಯದಲ್ಲಿ ದೇವಿಯ ಗುಡಿಯಲ್ಲಿ ದೇವಿಯು ಮೈ ಮೇಲೆ ಬಂದು ಕುಣಿಯುವ ಭಕ್ತರು ಸಾಮಾನ್ಯ, ಕುಣಿಯುವಾಗ ಕೈಯಲ್ಲಿ ಬೆತ್ತದ ಕೋಲು ಹಿಡಿದು ವೀರಾವೇಶದಿಂದ ಕುಣಿಯುವ ಭಕ್ತರು “ಚಾಗಂಭಲೋ ಹೋಗಭಲೋ” ಎಂದು ಗಂಡು ಹೆಣ್ಣು ಬೇಧವಿಲ್ಲದೆ ಡೊಳ್ಳಿನ ನಾದಕ್ಕೆ ತಕ್ಕಂತೆ ಕುಣಿಯುತ್ತಾರೆ. ಇಂದು ಮಾಯಾಕ್ಕನ ಅವತಾರ ಎಂಬ ನಂಬಿಕೆ ಪ್ರತೀತ ಇದೆ.

ಜಾತ್ರೆ ಅಂಗವಾಗಿ ಭಾರಿ ಪ್ರಮಾಣದಲ್ಲಿ ದನಗಳ ಜಾತ್ರೆಯೂ ನೆರೆವೇರುತ್ತದೆ. ದಾಖಲೆಗಳ ಪ್ರಕಾರ 1881 ರಿಂದ ಜಾತ್ರೆ ವಿಶೇಷ ಪ್ರಸಿದ್ಧ ಪಡೆದಿದ್ದು ಆ ಸಮಯದಲ್ಲಿ 60 ಸಾವಿರ ಜಾನೂವಾರುಗಳ ಮಾರಾಟವಾದ ಬಗ್ಗೆ ಮುಂಬಯಿ ಇಲಾಖೆಗೆ ಸೇರಿದ ಕರ್ನಾಟಕ ಗೆಜೆಟಿಯರ್ ಮೂಲಕ ತಿಳಿಯಬಹುದು. ಮಾಯಾಕ್ಕಾನ ಜಾತ್ರೆಯಲ್ಲಿ ಎಲ್ಲ ತರಹದ ಗೃಹೋಪಯೋಗಿ ವಸ್ತಗಳು ದೊರೆಯುತ್ತವೆ. ಜಾತ್ರೆ ನಂತರ ಸುಮಾರು ಒಂದು ತಿಂಗಳ ಕಾಲ ಅಂಗಡಿ ಮುಂಗಟ್ಟುಗಳ ವ್ಯಾಪಾರ  ವಹಿವಾಟು ನಡೆಯುತ್ತದೆ.