ಉ.ಕ ಸುದ್ದಿಜಾಲ ಹುಬ್ಬಳ್ಳಿ :

ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಅದೆಷ್ಟೋ ಸಮಸ್ಯೆಗಳಿದ್ದರೂ ಪಾಲಿಕೆ ಮಾತ್ರ ಸಾಕಷ್ಟು ನಿರ್ಲಕ್ಷ್ಯ ವಹಿಸುತ್ತಿದೆ. ಈಗ ಪಾಲಿಕೆಯ ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬ ಜೀವ ಕಳೆದುಕೊಂಡಿರುವ ಆರೋಪ ಈಗ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಹುಟ್ಟು ಹಾಕಿದೆ.

ಸುಮಾರು ಬಾರಿ ಮನವಿ ಸಲ್ಲಿಸಿದರೂ ಕೂಡ ಪಾಲಿಕೆ ಕ್ರಮ ಕೈಗೊಳ್ಳದೇ ಇರುವುದು ವ್ಯಕ್ತಿ ಸಾವಿಗೆ ಕಾರಣವೆಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಚನ್ನಪೇಟೆಯ ಅಂಬೇಡ್ಕರ್ ಕಾಲೋನಿಯಲ್ಲಿ ರಾಜಕಾಲುವೆ ಸಾಕಷ್ಟು ಅವ್ಯವಸ್ಥೆಗೆ ಸಾಕ್ಷಿಯಾಗಿದೆ. ಇಲ್ಲಿನ ಅವ್ಯವಸ್ಥೆಯಿಂದ ಹಾವುಗಳು ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಜನರಲ್ಲಿ ಭಯವನ್ನು ಹುಟ್ಟು ಹಾಕಿದ್ದವು.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಕಷ್ಟು ಮನವಿ ಮಾಡಿದರೂ ಯಾರೊಬ್ಬರೂ ಕಣ್ಣು ತೆರೆದು ನೋಡದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಹಾವು ಕಡಿದು ಸಾವನ್ನಪ್ಪಿದ್ದು,

ಈಗ ಪಾಲಿಕೆಯ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರು ಹಾಗೂ ಸ್ಥಳೀಯರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೌದು.. ಪಡಿಯಪ್ಪ ನಂದವಾಡಗಿ(42) ಅಂಬೇಡ್ಕರ್ ನಗರದ ಚನ್ನಪೇಟೆಯ ನಿವಾಸಿಯಾಗಿದ್ದು, ಹಾವು ಕಡಿದು ಶನಿವಾರ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಪಾಲಿಕೆ ದಿವ್ಯ ನಿರ್ಲಕ್ಷ್ಯದಿಂದ ವ್ಯಕ್ತಿ ಸಾವನ್ನಪ್ಪಿದ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ.

ಇನ್ನೂ ರಾಜಕಾಲುವೆಯು ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು, ಸಣ್ಣದೊಂದ ಪಾನ್ ಶಾಫ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಪಡಿಯಪ್ಪ ನಂದಗವಾಡಿ ಹಾವು ಕಡಿದು ಸಾವನ್ನಪ್ಪಿದ್ದಾರೆ.

ಇದರಿಂದ ಕುಟುಂಬಕ್ಕೆ ಬರಸಿಡಿಲು ಬಡೆದಂತಾಗಿದೆ. ಕುಟುಂಬಕ್ಕೆ ಆದಾರವಾಗಿದ್ದ ಪಡಿಯಪ್ಪನೇ ಈಗ ಇಂತಹದೊಂದು ಘಟನೆಯಲ್ಲಿ ಸಾವನ್ನಪ್ಪಿದ್ದು, ಕೂಡಲೇ ಪಾಲಿಕೆ ಹಾಗೂ ಸರ್ಕಾರ ಸೂಕ್ತ ಪರಿಹಾರ ನೀಡುವ ಮೂಲಕ ಸಾವಿಗೆ ನ್ಯಾಯ ಒದಗಿಸುವಂತೆ ದಲಿತ ವಿಮೋಚನಾ ಹೋರಾಟ ಸಮಿತಿ ಆಗ್ರಹಿಸಿದೆ.

ಒಟ್ಟಿನಲ್ಲಿ ಸಮಸ್ಯೆಗೆ ತಕ್ಷಣವೇ ಪಾಲಿಕೆ ಸ್ಪಂದಿಸಿ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದರೇ ಇಂತಹದೊಂದು ಅವಘಡ ನಡೆಯುತ್ತಿರಲಿಲ್ಲ. ಅಲ್ಲದೇ ಪಾಲಿಕೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈಗ ಜೀವವೊಂದು ಬಲಿಯಾಗಿದ್ದು, ಈ ಬಗ್ಗೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.