ಉ.ಕ ಸುದ್ದಿಜಾಲ ಬೆಳಗಾವಿ : 

ಖಾನಾಪುರ ಪೊಲೀಸ್ ತರಬೇತಿ ಶಾಲೆಯ 22 ಪ್ರಶಿಕ್ಷಣಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ವಿಷಪೂರಿತ ಆಹಾರ ಸೇವಿಸಿರುವ ಶಂಕೆ ವ್ಯಕ್ತವಾಗಿದೆ.

ಖಾನಾಪುರದಲ್ಲಿರುವ ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆಯಲ್ಲಿ‌ 9 ತಿಂಗಳ ಬುನಾದಿ ತರಬೇತಿ ಪಡೆಯಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪ್ರಶಿಕ್ಷಣಾರ್ಥಿಗಳ ಪೈಕಿ 22 ಪ್ರಶಿಕ್ಷಣಾರ್ಥಿಗಳು ವಿಷಪೂರಿತ ಆಹಾರ ಸೇವಿಸಿದ್ದರಿಂದ ಅಸ್ವಸ್ಥಗೊಂಡಿದ್ದರು.

ವಾಂತಿ ಬೇಧಿ, ಜ್ವರ ಮತ್ತು ಸುಸ್ತು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸೋಮವಾರ ಬೆಳಗ್ಗೆ ಖಾನಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಭಾನುವಾರ ಸಂಜೆ ತರಬೇತಿ ಶಾಲೆಯ ಅಡುಗೆ ಮನೆಗೆ ರಜೆ ನೀಡಲಾಗಿತ್ತು. ಪ್ರಶಿಕ್ಷಣಾರ್ಥಿಗಳು ಖಾನಾಪುರದ ಬೇರೆ ಬೇರೆ ಹೋಟೆಲ್ ಗಳಿಗೆ ತೆರಳಿ ರಾತ್ರಿ ಊಟ ಮಾಡಿ ತರಬೇತಿ ಶಾಲೆಗೆ ಮರಳಿದ್ದರು. ಬಳಿಕ ರಾತ್ರಿಯಿಡೀ ಆರೋಗ್ಯ ಸಮಸ್ಯೆ ಅನುಭವಿಸಿದ್ದರಿಂದ ಸೋಮವಾರ ಬೆಳಗ್ಗೆ ಅಸ್ವಸ್ಥಗೊಂಡ 22 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು

ಖಾನಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಪ್ರಶಿಕ್ಷಾರ್ಥಿಗಳು ಭಾನುವಾರ ರಾತ್ರಿ ಸೇವಿಸಿದ ಆಹಾರದ ಬಗ್ಗೆ ತನಿಖೆ ನಡೆದಿದ್ದು, ವಿಷಪೂರಿತ ಆಹಾರ ನೀಡಿದವರನ್ನು ಪತ್ತೆ ಹಚ್ಚಿ, ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ನಾರಾಯಣ ವಡ್ಡಿನ್ ಮಾಹಿತಿ ನೀಡಿದ್ದು, ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಾದ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳನ್ನು ಒಳರೋಗಿಗಳನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದರು.

ಸೋಮವಾರ ಸಂಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಭೇಟಿ ನೀಡಿ ಪರಿಶೀಲಿಸಿದರು. ಚಿಕಿತ್ಸೆ ಪಡೆಯುತ್ತಿರುವ ಪ್ರಶಿಕ್ಷಣಾರ್ಥಿಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಸಂಗೀತ ನಿರ್ದೇಶಕ ಗುರುಕಿರಣ ಕೂಡ ಉಪಸ್ಥಿತರಿದ್ದರು.