ಉ.ಕ ಸುದ್ದಿಜಾಲ ಕಾಗವಾಡ :

ಮಹಾರಾಷ್ಟ್ರದ ಘಟ್ಟ ಪ್ರದೇಶಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಿಂದಾಗಿ ನದಿ ಪಾತ್ರದ ರೈತರಲ್ಲಿ ಆತಂಕ ಎದುರಾದರೆ ಇನ್ನೊಂದು ಕಡೆ ಮಳೆಯಿಲ್ಲದೆ ಬೆಳೆದ ಬೆಳೆಗಳು ಒಣಗುತ್ತಿದ್ದು ರೈತರಲ್ಲಿ ಆತಂಕ ಎದುರಾಗಿದೆ.

ಸಕಾಲಕ್ಕೆ ಮಳೆ ಬಾರದ ಕಾರಣ ಚಿಕ್ಕೋಡಿ ಉಪವಿಭಾಗದ ಅಥಣಿ, ಕಾಗವಾಡ ಹಾಗೂ ರಾಯಬಾಗ ತಾಲೂಕಿನಲ್ಲಿ ಬೆಳೆದ ಬೆಳೆಗಳು ಒಣಗಲು ಪ್ರಾರಂಭಿಸಿವೆ. ಸತತ ಬರಗಾಲದಿಂದ ಕಂಗೆಟ್ಟ ಜನತೆಗೆ ಗಾಯದ ಮೇಲೆ ಮತ್ತೆ ಬರೆ ಎಳೆದಂತಾಗಿದೆ.

ಮುಂಗಾರು ಮಳೆ ಆರಂಭದಲ್ಲೇ ಆರ್ಭಟಿಸಿದ್ದರಿಂದ ಹರ್ಷದಿಂದ ರೈತಾಪಿ ವರ್ಗ ಸಾಲ ಸೂಲ ಮಾಡಿ ತೊಗರಿ, ಮುಸುಕಿನ ಜೋಳ, ಸಜ್ಜೆ, ನೆಲಗಡಲೆ, ಉದ್ದು ವಿವಿಧ ವಾಣಿಜ್ಯ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ.

ಆದರೆ ಮಳೆ ಕೈ ಕೊಟ್ಟಿರುವ ಪರಿಣಾಮ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತರ ಮಂದಹಾಸ ಮುದುಡಿ ಹೋಗಿದೆ. ಮಳೆಯ ಪ್ರಮಾಣ ದಿನದಿಂದ ದಿನಕ್ಕೆ ಕ್ಷೀಣಿಸಿದ್ದು, ಬಿಸಿಲಿನ ತಾಪಕ್ಕೆ ಭೂಮಿಯಲ್ಲಿನ ತೇವಾಂಶ ಕಡಿಮೆಯಾಗಿ ವಿವಿಧ ಬೆಳೆಗಳು ಬೆಳವಣಿಗೆ ಆಗದೆ ತಳಮಟ್ಟದಲ್ಲೆ ಒಣಗಿ ಹೋಗುತ್ತಿವೆ.

ಕೃಷಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೆಳೆ ಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿ ಸೂಕ್ತ ಪರಿಹಾರ ಒದಗಿಸುವಂತೆ ರೈತರು ಆಗ್ರಹಿಸಿದ್ದಾರೆ.