ಉ.ಕ ಸುದ್ದಿಜಾಲ ಕಲಬುರಗಿ :

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಬಳೂರಗಿ ರಸ್ತೆಯ ಅಳ್ಳೋಳ್ಳಿ ಕ್ರಾಸ್ ನಲ್ಲಿ ಭೀಕರ ಅಪಘಾತ ಸಂಭವಿಸಿ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸ್ಥಳದಲ್ಲಿಯೇ ದುರ್ಮರಣ ಹೊಂದಿದ್ದಾರೆ.

ಹೊಟ್ಟೆಪಾಡಿಗಾಗಿ ಜೀವನ ಅರಸಿ ನೇಪಾಳ ಮೂಲದಿಂದ ಕಲಬುರಗಿಗೆ ಬಂದಿದ್ದ ಕುಟುಂಬದಲ್ಲಿ ವಿಧಿ ಘೋರ್ ಆಟ ಆಡಿದೆ. ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.

ನೇಪಾಳ ಮೂಲದ ರತನ್ ನೇವರ್ (25), ಅಸ್ಮೀತಾ (21), ಸ್ವಸ್ತಿಕಾ (18), ಮಿಲನ್ (5) ಮತ್ತು ಲಖನ್ (2) ವರ್ಷ ಮೃತರು. ಮೃತ ಕುಟುಂಬ ಕಳೆದ ಹಲವು ವರ್ಷಗಳಿಂದ ಅಫಜಲಪುರ ಪಟ್ಟಣದಲ್ಲಿಯೇ ವಾಸವಿದ್ದು, ಹೊಟ್ಟೆಪಾಡಿಗಾಗಿ ರಸ್ತೆ ಪಕ್ಕದಲ್ಲಿ ಫಾಸ್ಟ್ ಫುಡ್ ಹೊಟ್ಟೆ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು.

ಗುರುವಾರ ಮಹಾರಾಷ್ಟ್ರದ ಧುಧನಿಯಿಂದ ಅಫಜಲಪುರಕ್ಕೆ ಮಕ್ಕಳೊಂದಿಗೆ ಒಂದೇ ಬೈಕ್ ನಲ್ಲಿ ಬರುತ್ತಿದ್ದಾಗ ಎದುರಿಗೆ ಬಂದಿರೋ ಲಾರಿ ಡಿಕ್ಕಿ ಹೊಡೆದು ಬೈಕ್ ನಲ್ಲಿದ್ದ ಐವರು ಸ್ಥಳದಲ್ಲೇ ಅಸುನಿಗಿದಿದ್ದಾರೆ.

ಘಟನಾ ಸ್ಥಳಕ್ಕೆ ಅಫಜಲಪುರ ಠಾಣೆ ಪೊಲೀಸರು ಭೇಟಿ ನೀಡಿ, ಮೃತ ದೇಹಗಳನ್ನು ಅಫಜಲಪುರ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸುಲು ಕೂಡ ಅಪಘಾತವಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಇಡೀ ಕುಟುಂಬವನ್ನೇ ಕಳೆದುಕೊಂಡಿರೋ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಕೆಲವೇ ಹೊತ್ತಿನಲ್ಲಿ ಮನೆ ಸೇರುವಷ್ಟರಲ್ಲಿಯೇ ಯಮನಂತೆ ಎದುರಿಗೆ ಬಂದ ಲಾರಿ ಇಡೀ ಕುಟುಂಬಸ್ಥರನ್ನು ಬಲಿ ಪಡೆದಿರೋದು ಘೋರ ದರಂತವೇ ಸರಿ.