ಅಂಕಣ – ವಿನಾಯಕ ವಶಿಷ್ಟ, ಜಿಲ್ಲಾ ವರದಿಗಾರ ಬೆಳಗಾವಿ

ಹೌದು…..ನಾನೊಬ್ಬ ಕಬ್ಬು ಬೆಳೆಗಾರನಾಗಿ ಹೇಳುತ್ತಿರುವೆ. ಈ ಇಬ್ಬರು ಹೋರಾಟಗಾರರು ಇರದಿದ್ದರೆ ಇಂದು ನಾವ್ಯಾರೂ ವರ್ಷದೊಳಗೆ ಎರಡು ಸಲ ಬೆಲೆ ಹೆಚ್ಚಳ ನೋಡುವುದು ಬಿಡಿ ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿರಲಿಲ್ಲ. ಆದರೆ ಅಸಾಧ್ಯವನ್ನು ಸಾಧಿಸಿ ತೋರಿಸಿದ ಕೀರ್ತಿ ಈ ಇಬ್ಬರಿಗೂ ಸಲ್ಲಬೇಕು.

ಅಂದೊಂದಿತ್ತು ಕಾಲ….ಕಬ್ಬು ಕಟಾವು ಮಾಡಬೇಕಾದರೆ ಕಾರ್ಖಾನೆ ಅಧಿಕಾರಿಯ ಕಾಲು ಹಿಡಿಯಬೇಕಿತ್ತು. ಆರ್ಡರ್ ಪಡೆಯಲು ನಾಯಿಯಂತೆ ಆತನ ಸುತ್ತು ಗಿರಕಿ ಹೊಡೆಯಬೇಕಿತ್ತು. ಕಬ್ಬು ಕಟಾವಿನ ನಂತರ ಬಿಲ್ ಕೇಳುವ ಪರಂಪರೆ ಇರಲಿಲ್ಲ. ಬ್ಯಾಂಕಿಗೆ ಹೋಗಿ ಪಾಸ್ ಬುಕ್ ಪ್ರಿಂಟ್ ಹಾಕಿಸಿ ಹಣ ಜಮೆಯಾಗಿದೆಯಾ ಎಂದು ನೋಡುವುದಾಗಿತ್ತು. ಇನ್ನೂ ಕೆಲವು ಕಾರ್ಖಾನೆಗಳಂತೂ ಬಿಲ್ ಕೊಡುವುದನ್ನೇ ಮರೆತು ಬಿಟ್ಟಿದ್ದವು.

ಬಡ ರೈತ ಬೆಳೆದ ಕಬ್ಬು ಕಾರ್ಖಾನೆಗೆ ಕೊಟ್ಟು, ಬಿಲ್ ಗಾಗಿ ಕಾದು ಸುಸ್ತಾದರೂ ಕೇಳುವವರು ಇರಲಿಲ್ಲ. ಈತ ಕಾರ್ಖಾನೆ ಶಪಿಸುತ್ತಾ ಮನೆಯಲ್ಲೇ ಇರಬೇಕಾಗಿತ್ತು. ಇನ್ನೂ ಕೆಲವರಂತೂ ಬಿಲ್ ಕೇಳಲು ಹೋದರೆ ಪಿಸ್ತೂಲು ತೋರಿಸಿ ರೈತರನ್ನು ಹೆದರಿಸಿದ್ದು ಉಂಟು. ಇಂತಹ ಎಲ್ಲಾ ಆಯಾಮ ದಾಟಿ ಇಂದು ನಾನೊಬ್ಬ ಕಬ್ಬು ಬೆಳೆಗಾರರ ಎಂದು ಹೆಮ್ಮೆಯಿಂದ ಹೇಳುವ ಮಟ್ಟಿಗೆ ಕಾಲ ಬದಲಾಗಿದೆ.

ಬೆಳಗಾವಿ ಸೇರಿದಂತೆ ರಾಜ್ಯದ 81 ಸಕ್ಕರೆ ಕಾರ್ಖಾನೆಗಳ ಪೈಕಿ ಭಾಗಶಃ ನಮ್ಮನ್ನು ಆಳುವ ರಾಜಕಾರಣಿಗಳ ಕೈಯಲ್ಲಿವೆ. ಇದರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸಮಪಾಲು ಹೊಂದಿವೆ. ಶಾಮನೂರು ಹಾಗೂ ನಿರಾಣಿ ಕುಟುಂಬದ ಪಾಲೂ ಸಾಕಷ್ಟಿದೆ. ಈ ಮಧ್ಯೆ ರಾಜಕೀಯ ಹಿನ್ನಲೆಯೇ ಇಲ್ಲದ ಹೆಬ್ಬಾಳಕರ್, ಲಕ್ಷ್ಮಣ ಸವದಿ, ಜಾರಕಿಹೊಳಿ ಕುಟುಂಬಗಳು ಸಕ್ಕರೆ ಸಾಮ್ರಾಜ್ಯವನ್ನೇ ನಿರ್ಮಿಸಿಕೊಂಡವರು.

ನಮ್ಮನಾಳುವ ರಾಜಕೀಯ ನಾಯಕರ ಹಿಡಿತದಲ್ಲಿ ಸಕ್ಕರೆ ಕಾರ್ಖಾನೆಗಳಿವೆ. ಯಾವುದೋ ಮುಖ್ಯಮಂತ್ರಿ ಬಂದು ಗಂಟೆಗಟ್ಟಲೆ ಸಭೆ ನಡೆಸುವ ಬದಲು ಹತ್ತು ನಿಮಿಷ ಕಾರ್ಖಾನೆ ಮಾಲಿಕರಾದ ಸಂಸದರು, ಶಾಸಕರ ಕಿವಿ ಹಿಡಿದರೆ ಸಮಸ್ಯೆ ಪರಿಹಾರ ಮಾಡಬಹುದು. ಆದರೆ ಅವರು ಹಾಗೆ ಮಾಡಲ್ಲ. ಸಮಸ್ಯೆ ಬಗೆಹರಿಸುವ ನಾಟಕ ಮಾಡುತ್ತಾರೆ. ಸಾಧ್ಯವಾದಷ್ಟು ಸತಾಯಿಸುತ್ತಾರೆ. ಕೊನೆಗೆ ನನ್ನ ಆಶಿರ್ವಾದವೇ ನಿನಗೆ ಶ್ರೀರಕ್ಷೆ ಎಂಬಂತೆ ಬಿಸ್ಕತ್ತು ಹಾಕಿ ತಮ್ಮ ಬ್ಯುಸಿನೆಸ್ಸು ಮುಂದುವರಿಸುತ್ತಾರೆ.

ಶಾಸಕರಾದರೆ ಮೊದಲು ಕಾಣುವ ಕನಸೇ ಸಕ್ಕರೆ ಕಾರ್ಖಾನೆ ನಿರ್ಮಿಸುವುದು. ಬೇಕಾದ ಹಾಗೆ ಕೋಟ್ಯಾಂತರ ರೂ. ಸಾಲ ಪಡೆಯುವುದು. ಹೊರ ಜಗತ್ತಿನಲ್ಲಿ ತೇಲಾಡುವ ಕಪ್ಪು ಹಣ ತಂದು ಶುಭ್ರವಾದ ನೋಟುಗಳಾಗಿ ಪರಿವರ್ತಿಸುವ ಮೂಲಕ ಮತ್ತೆ ಮುಂದಿನ ಚುನಾವಣೆಯಲ್ಲಿ ವೋಟಿಗೆ 2 ಸಾವಿರ ಕೊಡಲು ಸಜ್ಜಾಗುವುದು. ಇದೇ ಸಕ್ಕರೆ ಹಿಂದಿನ ಕರಾಳ ಸತ್ಯ. ಅದು ತಿನ್ನಲು ಮಾತ್ರ ಸಿಹಿ ಆದರೆ ಸಿಹಿ ಒಳಗೊಂದು ವಿಷ ತುಂಬಿಕೊಂಡಿದೆ.

ಬರೆಯುತ್ತಾ ಹೋದರೆ ಮುಗಿಯದ ಕಥೆ ಈ ಕಬ್ಬು ಬೆಳೆಯದು. ನಷ್ಟದಲ್ಲಿ ಇರುತ್ತಲೇ ಹೊಸ ಕಾರ್ಖಾನೆ ನಿರ್ಮಾಣಗೊಳ್ಳುತ್ತವೆ. ಸಹಕಾರಿ ಒಡೆತನದ ಸಕ್ಕರೆ ಕಾರ್ಖಾನೆಗಳು ಮಾತ್ರ ಈ ಜನ್ಮದಲ್ಲಿ ಲಾಭ ಮಾಡಲ್ಲ‌ ಕಾರಣ ಲಾಭ ಆಗದಂತೆ ವ್ಯವಸ್ಥೆ ರೂಪಿಸುವುದೇ ಸಹಕಾರ ತತ್ವ. ಆದರೆ ಖಾಸಗಿಗಳು ಮಾತ್ರ ಲಾಭದಲ್ಲಿ ಬರುತ್ತವೆ. ಕಾರಣ ಹುಡುಕಿದರೆ ಸಿಗಲು ಸಾಧ್ಯವಿರದ ವಿಷಯವದು.

ನಷ್ಟದಲ್ಲಿರುವ ಕಾರ್ಖಾನೆ ನಡೆಸಲು ಪೈಪೋಟಿ ಅಷ್ಟಿಷ್ಟಲ್ಲ. ಐದು ವರ್ಷಕೊಮ್ಮೆ ನಡೆಯುವ ಚುನಾವಣೆಯಲ್ಲಿ ಹೊಡೆದಾಟಗಳೇ ನಡೆಯುತ್ತವೆ. ನಷ್ಟದ ಕಾರ್ಖಾನೆ ತಗೆದುಕೊಂಡು ಏನು ಮಾಡುತ್ತಾರೆ ಎಂಬ ಪ್ರಶ್ನೆ ಮೂಡಬಹುದು. ನಡೆಸುವವರಿಗೆ ಗೊತ್ತು ನಷ್ಟ ಜನಕ್ಕೆ, ಲಾಭ ಅವರಿಗೆ ಎಂಬ ಲೆಕ್ಕ. ನಷ್ಟದ ಕಾರ್ಖಾನೆ ನಡೆಸುತ್ತಾ ಹೊಸದಾಗಿ ಸ್ವಂತದ ಕಾರ್ಖಾನೆ ಕಟ್ಟಿದ ಉದಾಹರಣೆ ಸಾಕಷ್ಟಿದೆ.

ಆದರೆ ಕಾಲ ಬದಲಾಗಿದೆ. ಅಂದು ರೈತರನ್ನು ಕಾಡಿದವರು ಇಂದು ನಡು ಬಗ್ಗಿಸಿ ನಿಂತಿದ್ದಾರೆ. ಕಾರ್ಖಾನೆ ಜುಟ್ಟು ಈಗ ರೈತರ ಕೈಗೆ ಬಂದಿದೆ. ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಪಡಸಲಗಿ ( ಗುರೂಜಿ ) ಹೋರಾಟದ ಮೂಲಕ ಒಂದೇ ವರ್ಷದ ಅವಧಿಯಲ್ಲಿ 600 ಹಣ ದೊರಕಿಸಿಕೊಟ್ಟಿದ್ದಾರೆ. ಇದು ಸಾಮಾನ್ಯ ಸಂಗತಿಯಲ್ಲ. ಕೊಬ್ಬಿದ ಗೂಳಿಗಳಿಂದ ಲಾಭದ ಭಾಗ ಕಸಿದುಕೊಳ್ಳುವುದು ಸಾಮಾನ್ಯ ಕೆಲಸವಲ್ಲ.

ಇಬ್ಬರು ಹೋರಾಟಗಾರರ ಮೇಲಿನ ಜನರ ಪ್ರೀತಿ ಹೀಗೆ ಮುಂದುವರಿಯಲಿ. ಇನೈದು ವರ್ಷ ಇದೇ ಹೋರಾಟ ಇದ್ದರೆ ಕಬ್ಬು ಬೆಳೆಗಾರ ಸಾಲದಿಂದಲೇ ಬಲುದೂರ ಸಾಗುತ್ತಾನೆ. ಇವರಿಬ್ಬರ ಪ್ರಯತ್ನಕ್ಕೆ ಸಲಾಂ. ನಿಮ್ಮ ಬದುಕು ಸುಂದರವಾಗಿರಲಿ. ಜೈ ರೈತ…💓