ಉ.ಕ ಸುದ್ದಿಜಾಲ ಮೈಸೂರು :

ಕೇಂದ್ರ ಸಚಿವ ನಿತಿನ್ ಗಡ್ಕರಿ ಬೆಂಗಳೂರು ಮೈಸೂರು ಹೈವೆ ಪರಿಶೀಲನೆ ನಡೆಸಿದ್ದು, ಫೆಬ್ರವರಿ ಅಂತ್ಯದೊಳಗೆ ಕಾಮಗಾರಿ ಮುಗಿಸಲು ಸೂಚನೆ ನೀಡಿದ್ದಾರೆ. ರಸ್ತೆ ಬಹಳ ಚೆನ್ನಾಗಿ ಬಂದಿದೆ. ಸರ್ವಿಸ್ ರೋಡ್ ಸಂಪೂರ್ಣವಾಗಿ ನಿರ್ಮಾಣವಾಗುವ ವರೆಗೂ ಎಲ್ಲಾ ವಾಹನಗಳಿಗೆ ಅವಕಾಶ ನೀಡಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು ಸರ್ವಿಸ್ ರಸ್ತೆ ನಿರ್ಮಾಣವಾದ ಬಳಿಕ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ಹೈವೆಯಲ್ಲಿ ಪ್ರವೇಶವಿಲ್ಲ. ಆಕ್ಸಿಡೆಂಟ್ ಫ್ರೀ ರಸ್ತೆ ಮಾಡುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಉತ್ತರ ಪ್ರದೇಶದ ನದಿಗಳ ಹೆಸರನ್ನು ಹೈವೆಗಳಿಗೆ ಇಟ್ಟಿದ್ದಾರೆ. ಅದೇ ರೀತಿಯಲ್ಲಿ ಕಾವೇರಿ ನದಿ ಹೆಸರನ್ನು ಹೈವೆಗೆ ಇಡಲು ಮನವಿ ಮಾಡಿದ್ದೇನೆ. ಕಾವೇರಿ ನಮ್ಮ ಜೀವನದಿ, ಪವಿತ್ರ ಮತ್ತು ಬಹಳ ಭಕ್ತಿಯಿಂದ ಪೂಜಿಸುವ ನದಿ ಬೆಂಗಳೂರು ಉದ್ಧಾರವಾಗಿರುವುದೇ ಕಾವೇರಿ ನದಿಯಿಂದ ರಾಜಕಾರಣಿಗಳು ಒಂದೊಂದು ಹೆಸರು ಹೇಳುತ್ತಿದ್ದಾರೆ.

ಕಾವೇರಿ ನದಿ ಇಲ್ಲದೆ ಇದ್ದರೆ ನಾವು ಯಾವ ನೀರು ಕುಡಿಯಬೇಕಿತ್ತು. ಕಾವೇರಿ ನದಿ ಇರದಿದ್ದರೆ ಕನ್ನಂಬಾಡಿ ಕಟ್ಟಲು ಆಗುತ್ತಿತ್ತಾ. ನಾಲ್ವಡಿ ಹೆಸರನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಇಡುತ್ತಿದ್ದು, ದೇವೇಗೌಡರ ಹೆಸರು ಕೂಡ ಕೇಳಿ ಬಂದಿದೆ.

ದೇಶದಲ್ಲಿ ಎಲ್ಲಿಯೂ ಹೈವೆಗೆ ವ್ಯಕ್ತಿಯ ಹೆಸರು ಇಟ್ಟಿಲ್ಲ. ಎಸ್.ಎಂ. ಕೃಷ್ಣ ಅವರ ಬಗ್ಗೆ ಗೌರವವಿದೆ ಅವರನ್ನು ಕೇಳುತ್ತೇವೆ ಎಲ್ಲರೂ ಸೇರಿ ಕಾವೇರಿ ನದಿ ಹೆಸರು ಇಡಲು ಸಿಎಂ ಗೆ ಮನವಿ ಮಾಡುತ್ತೇವೆ ಎಂದು ಪ್ರತಾಪ್ ಸಿಂಹ ಹೇಳಿದರು.