ಉ.ಕ ಸುದ್ದಿಜಾಲ ನಿಪ್ಪಾಣಿ :
ನಿಮ್ಮ ರಾಮ ಮಂದಿರ ಸ್ಫೋಟಿಸುತ್ತೇವೆ, ಸುಧಾರಿಸಿಕೊಳ್ಳಿ ಎಂಬ ಬರಹ ಇರುವ ಬೆದರಿಕೆ ಪತ್ರವೊಂದು ಪತ್ತೆಯಾಗಿದೆ.
ನಮ್ಮ ಮಂದಿರಕ್ಕೆ ರಕ್ಷಣೆ ನೀಡುವುದರ ಜೊತೆಗೆ ಬೆದರಿಕೆ ಪತ್ರ ಬರೆದಿರುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಿಪ್ಪಾಣಿ ಪಟ್ಟಣದ ಶ್ರೀ ರಾಮ ಮಂದಿರದ ಆಡಳಿತ ಮಂಡಳಿ ನಿಪ್ಪಾಣಿ ಶಹರ ಠಾಣೆಯಲ್ಲಿ ದೂರು ನೀಡಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ರಾಮ ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷ ಆನಂದ ಸೊಲಾಪೂರೆ ನೀಡಿರುವ ಮಾಹಿತಿ ಪ್ರಕಾರ, ಅಲ್ಲಾ ಹು ಅಕ್ಬರ್ ಹೆಸರಿನಲ್ಲಿ ಬೆದರಿಕೆ ಪತ್ರ ಬಂದಿದೆ. ರಾಮ ಮಂದಿರವನ್ನು ದೊಡ್ಡ ಪ್ರಮಾಣದಲ್ಲಿ ಸ್ಫೋಟಿಸುತ್ತೇವೆ ಎಂದು ಪತ್ರದಲ್ಲಿ ಬರೆದು, ಮಂದಿರದಲ್ಲಿ ಇಟ್ಟು ಹೋಗಿದ್ದಾರೆ.
ಈ ರೀತಿ ಪತ್ರ ಬರುತ್ತಿರೋದು ಎರಡನೇ ಬಾರಿಯಾಗಿದೆ. ಫೆಬ್ರವರಿ 7 ಹಾಗೂ 28 ರಂದು ಮಂದಿರದಲ್ಲಿ ಬೆದರಿಕೆ ಪತ್ರ ಬಂದಿದೆ. ಮುಂದಿನ 20, 21 ರಂದು ದೇಗುಲದ ಒಳಗಡೆ ಸ್ಫೋಟ ಮಾಡುತ್ತೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.
ಬೆದರಿಕೆ ಪತ್ರ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಪೊಲೀಸರು ಹೈ-ಅಲರ್ಟ್ ಆಗಿದ್ದಾರೆ. ಮಂದಿರದ ಆವರಣದಲ್ಲಿ 14 ಸಿಸಿಟಿವಿ ಅಳವಡಿಕೆ ಮಾಡಿದ್ದಾರೆ. ಜೊತೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
101 ವರ್ಷಗಳ ಇತಿಹಾಸ ಹೊಂದಿದ ಶ್ರೀ ರಾಮ ಮಂದಿರದ ಗರ್ಭ ಗುಡಿಯಲ್ಲಿ ಮೊದಲ ಪತ್ರ ಪತ್ತೆಯಾಗಿತ್ತು. ಎರಡೆನೇಯ ಪತ್ರ ಮಂದಿರದ ಆವರಣದಲ್ಲಿರುವ ಹನುಮಾನ ಮಂದಿರದಲ್ಲಿ ಪತ್ತೆಯಾಗಿದೆ.