ಉ.ಕ ಸುದ್ದಿಜಾಲ ಮಹಾರಾಷ್ಟ್ರ :

ಎಲ್ಲೆಲ್ಲೂ ತಾಳ ಮೃದಂಘಗಳ ನಾದ, ಕುದುರೆ ಕುಣಿತ ಕೊರಳಲ್ಲಿ ತುಳಸಿ ಮಾಲೆ, ಹಣೆಯ ಮೇಲೆ ಅಷ್ಟಗಂಧ ಹೆಗಲ ಮೇಲೆ ಬಾವುಟ, ಬಾಯಲ್ಲಿ ಪುಂಢಲಿಕ ವರದೇ ಹರೇ ಎಂದು ವಿಠಲನ ನಾಮಸ್ಮರಣೆ ಮಾಡುತ್ತ ಲಕ್ಷಾಂತರ ಭಕ್ತರ ಸಮಾಗದ ಸಂಕೇತ ಅದುವೆ ಶ್ರೀ ವಿಠ್ಠಲ ರುಕ್ಮಿಣಿ ಸನ್ನಿಧಿ ಪಂಡರಾಪುರ. ಆಷಾಡ ಏಕಾದಶಿ ಈ ಕುರಿತು ಒಂದು ಅಪರೂಪದ ಸ್ಟೋರಿ ಇಲ್ಲಿದೆ.

ಮಹಾರಾಷ್ಟ್ರದಲ್ಲಿರುವ ಪವಿತ್ರ ತೀರ್ಥಕ್ಷೇತ್ರ ಪಂಢರಪುರದಲ್ಲಿ ಆಷಾಢ ಏಕಾದಶಿ ಸಂಭ್ರಮ. ವಿಠ್ಠಲನ ಅವತಾರದಲ್ಲಿ ನೆಲೆಸಿರುವ ವಿಷ್ಣುವಿನ ದರ್ಶನ ಪಡೆದು ಪಾದಸ್ಪರ್ಶಿಸಲು ದೇಶದ ವಿವಿಧ ಭಾಗಗಳಿಂದ ಭಕ್ತರು ಪಂಢರಪುರಕ್ಕೆ ತೀರ್ಥಯಾತ್ರೆ ಕೈಗೊಳ್ಳುತ್ತಿದ್ದಾರೆ.

ಪಂಢರಪುರದಲ್ಲಿ ಆಷಾಢ ಏಕಾದಶಿ ಸಂಭ್ರಮ ಕಳೆಗಟ್ಟಿದೆ. ಕರ್ನಾಟಕದ ನೆರೆಯ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿರುವ ಪವಿತ್ರ ಕ್ಷೇತ್ರದಲ್ಲಿ ವಿಠ್ಠಲನ ಪಾದ ದರ್ಶನಕ್ಕೆ‌ ಲಕ್ಷಾಂತರ ಭಕ್ತರು ದೇಶದ ಮೂಲೆ ಮೂಲೆಗಳಿಂದ ಕಾಲ್ನಡಿಗೆಯಲ್ಲಿ ಯಾತ್ರೆ ಕೈಗೊಂಡಿದ್ದಾರೆ.

ಸೋಲಾಪುರ ಜಿಲ್ಲೆಯಲ್ಲಿ ಚಂದ್ರಭಾಗ ನದಿ ದಡದಲ್ಲಿರುವ ಪಂಢರಪುರದಲ್ಲಿರುವ ವಿಠ್ಠಲ ದೇವಾಲಯವು ವೈಷ್ಣವರ ಪವಿತ್ರ ಕ್ಷೇತ್ರವಾಗಿದೆ. ಇಲ್ಲಿ ವಿಷ್ಣುವನ್ನು ವಿಠ್ಠಲ ಅಥವಾ ಪಾಂಡುರಂಗ ರೂಪದಲ್ಲಿ ಆರಾಧಿಸಲಾಗುತ್ತದೆ.

ಇದು ಕೃಷ್ಣ ಅಥವಾ ವಿಷ್ಣುವಿನ ಪುನರ್ಜನ್ಮ ಎಂದು ನಂಬಲಾಗಿದೆ. ಜುಲೈ ತಿಂಗಳಲ್ಲಿ ಬರುವ ಆಷಾಢ ಏಕಾದಶಿ, ಪಂಢರಪುರದ ವಿಠ್ಠಲ ದೇವರ ಭಕ್ತರಿಗೆ ಬಹಳ ಶುಭ ಮತ್ತು ವಿಶೇಷ. ಈ ಏಕಾದಶಿಯಂದು ಭಕ್ತರು ತಮ್ಮ ವಾರ್ಷಿಕ ತೀರ್ಥಯಾತ್ರೆಯಲ್ಲಿ ಭಾಗವಹಿಸುತ್ತಾರೆ, ಇದನ್ನು ಮರಾಠಿಯಲ್ಲಿ “ವಾರಿ” ಎಂದು ಕರೆಯಲಾಗುತ್ತದೆ.

ವಾರಿ ಎಂಬುದು ಸುಮಾರು 21 ದಿನಗಳ ಮೆರವಣಿಗೆಯಾಗಿದ್ದು, ಇದರಲ್ಲಿ ಮಹಾರಾಷ್ಟ್ರ ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳಿಂದಲೂ ಭಕ್ತರು ಕಾಲ್ನಡಿಗೆಯಲ್ಲಿ ಪಂಢರಪುರಕ್ಕೆ ಮೆರವಣಿಗೆ ಮಾಡುತ್ತಾರೆ, ಆಷಾಢ ಏಕಾದಶಿಯ ದಿನದಂದು ಪಂಢರಪುರದಲ್ಲಿ ತೀರ್ಥಯಾತ್ರೆಯನ್ನು ಕೊನೆಗೊಳಿಸುತ್ತಾರೆ.

ಹೀಗೆ ಶ್ರದ್ದಾಭಕ್ತಿಯಿಂದ ವಾರಕರಿ ಸಂಪ್ರದಾಯದ ಭಕ್ತರು ಆಷಾಡ ಏಕಾದಶಿಗೆ ಪಂಡರಿನಾತನ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನ ಪೂರೈಸುವಂತೆ ಬೇಡಿಕೊಳ್ಳುತ್ತಾರೆ. ಲಕ್ಷಾಂತರ ಭಕ್ತರ ಸಮಾಗಮಕ್ಕೆ ಪಂಡರಪುರ ಸಾಕ್ಷಿಯಾಗಿದ್ದು ಸುಳ್ಳಲ್ಲ.