ಉ.ಕ ಸುದ್ದಿಜಾಲ ತುಮಕೂರು :
ಕೌಟುಂಬಿಕ ಕಲಹದಿಂದ ಗಂಡನೇ ತನ್ನ ಹೆಂಡತಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಜೀವ ತೆಗೆದಿರುವ ಘಟನೆ ತುಮಕೂರಿನ ಹೊರವಲಯದ ಅಂತರಸನಹಳ್ಳಿ ಬಳಿ ನಡೆದಿದೆ.
ಮಂಡ್ಯದ ಗಣನೂರು ಗ್ರಾಮದ ಗೀತಾ (20) ಜೀವವನ್ನ ಪತಿಯಾದ ನವೀನ್ ತೆಗೆದಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಹೆಂಡತಿಯ ಕುತ್ತಿಗೆ, ಮುಖ ಹಾಗೂ ದೇಹದ ಇತರೆ ಭಾಗಗಳಿಗೆ ಚಾಕುವಿನಿಂದ ಭಯಾನಕವಾಗಿ ಗಂಡ ಇರಿದಿದ್ದಾನೆ. ಇದರಿಂದ ಗೀತಾ ಅವರು ರಕ್ತದ ಮಡುವಿನಲ್ಲೇ ಉಸಿರು ಚೆಲ್ಲಿದ್ದಾರೆ.
ತುಮಕೂರು ತಾಲೂಕಿನ ಅಮೃತಗಿರಿಯ ವಾಸಿಯಾಗಿದ್ದ ನವೀನ್, ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಯಲ್ಲಿ ಕೆಲಸ ಮಾಡ್ತಿದ್ದನು. ಎರಡು ವರ್ಷಗಳ ಹಿಂದೆ ಸೋಶಿಯಲ್ ಮೀಡಿಯಾ ಮೂಲಕ ಇಬ್ಬರಿಗೂ ಪರಿಚಯವಾಗಿ ಪ್ರೇಮಾಂಕುರವಾಗಿತ್ತು. ಬಳಿಕ ಇಬ್ಬರು ಒಪ್ಪಿಗೆ ಮೇರೆಗೆ ಮದುವೆ ಆಗಿದ್ದರು.
ಮದುವೆಯಾದ ಮೇಲೆ ಗಂಡ, ಹೆಂಡತಿ ಅಂತರಸನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮನೆಯಲ್ಲಿ ಇರುವಾಗ ಇಬ್ಬರಿಗೂ ಆಗಾಗ ಗಲಾಟೆ ನಡೆಯುತ್ತಿತ್ತು. ಅದೇ ರೀತಿ ಕಳೆದ ರಾತ್ರಿ ಗಲಾಟೆ ತಾರಕಕ್ಕೇರಿದ್ದು ಜೀವ ತೆಗೆಯುವ ಮಟ್ಟಕ್ಕೆ ಹೋಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಪರಿಚಯ, ಮದುವೆ.. ಹೆಂಡತಿಯ ಉಸಿರು ನಿಲ್ಲಿಸಿದ ಪಾಪಿ ಗಂಡ
