ಉ.ಕ ಸುದ್ದಿಜಾಲ ಆಸಿಫಾಬಾದ್ (ತೆಲಂಗಾಣ) :
ಒಂದೇ ಮಂಟಪದಲ್ಲಿ ತನ್ನ ಇಬ್ಬರು ಪ್ರೇಯಸಿಯರನ್ನು ಯುವಕ ವರಿಸಿದ್ದಾನೆ. ಹೌದು.. ತೆಲಂಗಾಣದ ಲಿಂಗಾಪುರ ತಾಲೂಕಿನ ಘುಮನೂರು ಗ್ರಾಮದ ಯುವಕ ಸೂರ್ಯದೇವ್ ಕುಟುಂಬ ಮತ್ತು ಸ್ಥಳೀಯ ಸಮುದಾಯದ ಸಂಪೂರ್ಣ ಬೆಂಬಲದೊಂದಿಗೆ ಇಬ್ಬರು ಯುವತಿಯರಿಗೆ ಮಾಂಗಲ್ಯಧಾರಣೆ ಮಾಡಿದ್ದಾನೆ.
ಮೂಲಗಳ ಪ್ರಕಾರ, ಸೂರ್ಯದೇವ್ ಅಕ್ಕಪಕ್ಕದ ಗ್ರಾಮಗಳ ಇಬ್ಬರು ಯುವತಿಯರಾದ ಲಾಲ್‌ದೇವಿ ಮತ್ತು ಜಲಕರ್‌ದೇವಿ ಎಂಬುವರನ್ನು ಪ್ರೀತಿಸುತ್ತಿದ್ದ.
ಈ ವಿಚಾರ ತಿಳಿದ ಗಿರಿಜನ ಸಮುದಾಯದ ಹಿರಿಯರು ಹಾಗೂ ಗ್ರಾಮಸ್ಥರು ಮಧ್ಯಪ್ರವೇಶಿಸಿ ಇಬ್ಬರೂ ಮಹಿಳೆಯರ ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು. ಪರಸ್ಪರ ಒಪ್ಪಂದದ ನಂತರ, ಈ ಮೂವರ ಮದುವೆಯ ಮೂಲಕ ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಲು ನಿರ್ಧರಿಸಿದರು.
ಹಾಗೇ, ತಮ್ಮ ಹಿರಿಯರ ಆಶೀರ್ವಾದದೊಂದಿಗೆ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಿ ಸಾಂಪ್ರದಾಯಿಕ ಬುಡಕಟ್ಟು ಪದ್ಧತಿಯಂತೆ ಗುರುವಾರ ವಿವಾಹ ನೆರವೇರಿಸಲಾಯಿತು. ನವದಂಪತಿಗಳು ಸೌಹಾರ್ದಯುತವಾಗಿ ಒಟ್ಟಿಗೆ ಬಾಳುವುದಾಗಿ ಪರಸ್ಪರ ಒಪ್ಪಿಕೊಂಡು ಹಸೆಮಣೆ ಏರಿದ್ದಾರೆ.
ಡಬ್ಬಲ ಧಮಾಕಾ – ಒಂದೇ ಮಂಟಪದಲ್ಲಿ ಇಬ್ಬರು ಪ್ರೇಯಸಿಯರನ್ನು ವಿವಾಹವಾದ ಯುವಕ!
