ಉ.ಕ ಸುದ್ದಿಜಾಲ ವಿಜಯಪೂರ :

ನಡೆದಾಡುವ ದೇವರು ಎಂದು ಅಸಂಖ್ಯಾತ ಭಕ್ತರ ಕರೆದಯಯಲ್ಪಡುವ ಸಿದ್ದೇಶ್ವರ ಸ್ವಾಮೀಜಿಗಳು ತಮ್ಮ ಪ್ರವಚನದ ಮೂಲಕ ಜನಮಾನಸದಲ್ಲಿದ್ದರು. ಅನಾರೋಗ್ಯದಿಂದ ಸಿದ್ದೇಶ್ವರ ಸ್ವಾಮೀಜಿ ಅಗಲಿ ಎರಡು ವರ್ಷವಾಯಿತು. ಶತಮಾನದ ಸಂತನಿಲ್ಲದ ಜ್ಞಾನ ಯೋಗಾಶ್ರಮದಲ್ಲಿ ಭಕ್ತರು ಸಿದ್ದೇಶ್ವರ ಸ್ವಾಮೀಜಿ ಅವರ ಪ್ರವಚನ ನೆನೆಯುತ್ತಿದ್ದಾರೆ.

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾಗಿ ಎರಡು ವರ್ಷವಾದ ಕಾರಣ ಆಶ್ರಮದಲ್ಲಿ ಗುರುನಮನ ಕಾರ್ಯಕ್ರಮ ನಡೆಯಿತು. ಮೇಘಾಲಯದ ರಾಜ್ಯಪಾಲ ಸಿ.ಎಚ್ ವಿಜಯಶಂಕರ್, ಸಚಿವ ಶಿವಾನಂದ ಪಾಟೀಲ್, ಕನ್ಹೇರಿ ಮಠದ ಶ್ರೀಗಳು, ನಾಡಿನ ವಿವಿಧ ಮಠಾಧೀಶರು ಹಾಗೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಗುರುನಮನ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆ 6 ಗಂಟೆಗೆ ಜಪನಮನ ಕಾರ್ಯಕ್ರಮದ ಮೂಲಕ ಗುರುನಮನ ಆರಂಭವಾಯಿತು. ಬಳಿಕ ಪ್ರಣವ ಮಂಟಪದಲ್ಲಿ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ‌ಬಳಿಕ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕನ್ಹೇರಿ ಶ್ರೀಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆದವು. ಬಳಿಕ ಶ್ರೀಗಳ ಪ್ರವಚನದ ಒಟ್ಟು 20 ಕೃತಿಗಳನ್ನ ಬಿಡುಗಡೆ ಮಾಡಲಾಯಿತು.

ಇನ್ನೂ ಕಳೆದ ಡಿಸೆಂಬರ್ 25 ರಿಂದ ಆಶ್ರಮದಲ್ಲಿ ಗುರುನಮನ ಅಂಗವಾಗಿ ಪ್ರತಿದಿನ‌‌ ವಿವಿಧ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು. ನಾಡಿನ ಖ್ಯಾತನಾಮರು ಭಾಗಿಯಾಗಿ ಗೋಷ್ಠಿ ನಡೆಸಿಕೊಟ್ಟಿದ್ದರು. ಜನೇವರಿ 1ರಂದು ಸಂಜೆ ದೀಪ ನಮನ ಸಲ್ಲಿಸಲಾಯಿತು. ಭಕ್ತರು ದೀಪ ಬೆಳಗಿ ಶ್ರೀ ಗಳಿಗೆ ನಮನ ಸಲ್ಲಿಸಿದ್ರು. ಕೊನೆಯ ದಿನ ವೇದಿಕೆ ಕಾರ್ಯಕ್ರಮ ನಡೆಸುವ ಮೂಲಕ ಶ್ರೀಗಳ ಗುರುನಮನ ಕಾರ್ಯಕ್ರಮ ಮುಕ್ತಾಯ ಮಾಡಲಾಯಿತು.

ಗುರುನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ರಾಜ್ಯಪಾಲ ವಿಜಯಶಂಕರ್ ಅವರು, ಸಿದ್ದೇಶ್ವರ ಶ್ರೀಗಳ ಜೊತೆ ತಮಗಿದ್ದ ‌ಒಡನಾಟವನ್ನ ಹಂಚಿಕೊಂಅಡರು. ಸ್ವಾಮಿ ವಿವೇಕಾನಂದರ ರೀತಿ ಸಿದ್ದೇಶ್ವರ ಶ್ರೀಗಳು ಬದುಕಿದವರು. ವಿವೇಕಾನಂದರನ್ನ ಸಿದ್ದೇಶ್ವರ ಶ್ರೀಗಳ ರೂಪದಲ್ಲಿ ಕಂಡಿದ್ದೇನೆ ಎಂದರು.

ಗುರುನಮನ ಕಾರ್ಯಕ್ರಮಕ್ಕೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದುಬೈನಿಂದ ಭಕ್ತರು ಆಗಮಿಸಿದ್ದರು. ಲಕ್ಷಾಂತರ ಭಕ್ತರಿಗೆ ಸ್ವಯಂಸೇವಕರು ಪ್ರಸಾದದ ವ್ಯವಸ್ಥೆ ಮಾಡಿದರು. ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಕಾರ್ಯಕ್ರಮಗಳು ಮುಕ್ತಾಯವಾಗಿದ್ದು, ಸಿದ್ದೇಶ್ವರ ಶ್ರೀಗಳಿಗೆ ಭಕ್ತರು ಭಕ್ತಿ ಸಮರ್ಪಿಸಿದರು‌…