ಉ.ಕ ಸುದ್ದಿಜಾಲ ಬೆಂಗಳೂರು :

ಗ್ರಾಚ್ಯುಟಿ ಒಳಗೊಂಡು ಪ್ರಮುಖ ಬೇಡಿಕೆ ಈಡೇರಿಕೆಗೆ ಸರಕಾರದಿಂದ ಸಕಾರಾತ್ಮಕ ಸ್ಪಂದನೆ ಬಂದ ಹಿನ್ನೆಲೆಯಲ್ಲಿ 10 ದಿನಗಳಿಂದ ನಡೆಯುತ್ತಿದ್ದ ಅಂಗನವಾಡಿ ನೌಕರ ಹೋರಾಟ ಅಂತ್ಯಗೊಂಡಿದೆ.

ಈ ಕುರಿತು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮೀ, ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್ ಎಸ್ ಸುನಂದಾ ಹೇಳಿಕೆ ಮೂಲಕ ಸ್ಪಷ್ಟಪಡಿಸಿದ್ದು, ನಮ್ಮ ಪ್ರಮುಖ ಬೇಡಿಕೆಗಳನ್ನು ಸರಕಾರ ಈಡೇರಿಸಿದ ಹಿನ್ನೆಲೆಯಲ್ಲಿ ಹೋರಾಟವನ್ನು ಹಿಂಪಡೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ 2023 ಜನವರಿ 23 ರಿಂದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಬೆಂಗಳೂರಿನ ಫ್ರೀಡಂ ಪಾರ್ಕ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಸುಪ್ರಿಂ ಕೋರ್ಟಿನ ತೀರ್ಪಿನಂತೆ ಗ್ರಾಚ್ಯುಟಿ ನೀಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಬೇಕು,

ಅಂಗನವಾಡಿಗಳನ್ನು ಅನ್ನದ ಜೊತೆಗೆ ಅಕ್ಷರದ ಕೇಂದ್ರವಾಗಿಸಲು, ಅಂಗನವಾಡಿ ಕೇಂದ್ರಗಳಲ್ಲಿ ಶಾಲಾಪೂರ್ವ ಶಿಕ್ಷಣಕ್ಕೆ ನಿರ್ದಿಷ್ಟ ಸಮಯ ಮೀಸಲಿರಿಸಲು, ಶಿಕ್ಷಕಿ ಪದನಾಮ ನೀಡಲು, ಅಂಗನವಾಡಿಗೆ ಬರುವ ಮಕ್ಕಳಿಗೆ ಸಮವಸ್ತ್ರ, ಶೂ ನೀಡಲು ಹಾಗೂ ಅಂಗನವಾಡಿಯಲ್ಲಿ ಓದಿರುವ ಬಗ್ಗೆ ದೃಢೀಕರಣ ಪತ್ರ ನೀಡಲು, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸೇವಾ ನಿಯಮಾವಳಿ ರೂಪಿಸಲು, ಮಿನಿ ಅಂಗನವಾಡಿ ಹಾಗೂ ಸಹಾಯಕಿಯರಿಗೆ ಪದೋನ್ನತಿಗೆ ಇರುವ ಆದೇಶ ಮಾರ್ಪಡಿಸಲು,

ಅಂಗನವಾಡಿ ಕೇಂದ್ರಗಳನ್ನು ಮೇಲ್ದೆರ್ಜೆಗೇರಿಸಲು, ಅಂಗನವಾಡಿಗೆ ಸ್ವಂತ ಕಟ್ಟಡ ಕಟ್ಟಲು 30 ಲಕ್ಷ ರೂ ಮೀಸಲಿರಿಸಲು ಹಾಗೂ ಮೂಲಸೌಕರ್ಯ ಬಲವರ್ಧನೆಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿ ಕೆಲಸದ ಒತ್ತಡ ಕಡಿಮೆ ಮಾಡುವುದು ಸೇರಿದಂತೆ ಇತ್ಯಾದಿ ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಕಳೆದ ಹತ್ತು ದಿನಗಳಿಂದ ಹೋರಾಟ ನಡೆಯುತ್ತಿತ್ತು.

ಕೊರೆಯುವ ಚಳಿಯಲ್ಲಿಯೇ ಮಹಿಳೆಯರು ನಡೆಸಿದ ಈ ಐತಿಹಾಸಿಕ ಹೋರಾಟ ನಾಡಿನ ಎಲ್ಲರ ಗಮನ ಸೆಳೆದು ಸರ್ಕಾರ ಉತ್ತಮವಾಗಿ ಸ್ಪಂದಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಮಧ್ಯೆ ನಮ್ಮ ಹೋರಾಟಕ್ಕೆ ಸ್ಪಂದಿಸಿ ನಾಲ್ಕೈದು ಬಾರಿ ಸರ್ಕಾರದೊಂದಿಗೆ ಮಾತುಕತೆಗಳು ನಡೆದವು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರು ಹೋರಾಟದ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿದರು.

ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ನಿರ್ದೇಶಕರು, ಜಂಟಿ ನಿರ್ದೇಶಕರು, ಉಪನಿರ್ದೇಶಕರು ಹಾಗೂ ಇತರ ಹಿರಿಯ ಅಧಿಕಾರಿಗಳ ಜೊತೆಗೆ ನಿರ್ಧಿಷ್ಟ ವಿಷಯಗಳ ಕುರಿತು ಚರ್ಚೆಗಳು ನಡೆದವು. ಆದರೆ ಬೇಡಿಕೆ ಈಡೇರಿಕೆಗೆ ಸ್ಪಷ್ಟತೆ ಬಾರದೇ ಇರುವುದರಿಂದ ಹೋರಾಟವನ್ನು ಮುಂದುವರಿಸುವುದಾಗಿ ಘೋಷಿಸಲಾಗಿತ್ತು.

ಮೂಲಸೌಕರ್ಯಗಳ ಕೊರತೆಯ ಮಧ್ಯೆಯೂ ಹೋರಾಟ ತೀವ್ರತೆ ಪಡೆದಿತ್ತು. ಹಾಗಾಗಿ ಸಿಐಟಿಯುನ ಹೋರಾಟಕ್ಕೆ ಮಣಿದ ಸರಕಾರ ಹಾಗೂ ಇಲಾಖೆ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಿದೆ.

1) ಶಾಲಾಪೂರ್ವ ಶಿಕ್ಷಣಕ್ಕಾಗಿ ಬೆಳಿಗ್ಗೆ 10 ರಿಂದ 1 ಗಂಟೆಯ ವರೆಗೆ ನಿರ್ದಿಷ್ಟ ಸಮಯ ಮೀಸಲಿರಿಸಿದ ಸ್ಪಷ್ಟ ಆದೇಶವನ್ನು ಲಿಖಿತವಾಗಿ ನೀಡಿದೆ.

2) ಮಿನಿ ಅಂಗನವಾಡಿ ಹಾಗೂ ಸಹಾಯಕಿಯರ ಪದೋನ್ನತಿಯ ಕುರಿತು ಲೋಪದೋಷಗಳಿರುವ ಆದೇಶ ವಾಪಸ್ ಪಡೆದು, ಮಾರ್ಪಡಿಸಿದ ತಿದ್ದುಪಡಿ ಆದೇಶವನ್ನು ಲಿಖಿತವಾಗಿ ಪಡೆಯಲಾಯಿತು.

3) ಕಟ್ಟಡದ ವೆಚ್ಚ 12 ಲಕ್ಷದಿಂದ 20 ಲಕ್ಷಕ್ಕೆ ಏರಿಕೆಗೆ ಒಪ್ಪಿಗೆ ನೀಡಿದೆ.

4) ಮಕ್ಕಳಿಗೆ ಶೂ, ಸಮವಸ್ತ್ರ ಹಾಗೂ ಮೂಲಸೌಕರ್ಯ ಹೆಚ್ಚಿಸಲು ಒಪ್ಪಿಗೆ ನೀಡಿದೆ.

5) ಅಂಗನವಾಡಿಗಳಲ್ಲಿ ಶಾಲಾಪೂರ್ವ ಶಿಕ್ಷಣ ಪಡೆದ ದೃಢೀಕರಣ ಪತ್ರ ನೀಡಲು ಸಮ್ಮತಿ ನೀಡಿದ್ದಾರೆ.

6) ಇಲಾಖೆಯ ಅಧಿಕಾರಿಗಳ ಜೊತೆಗೆ ಮಾತುಕತೆಯ ವೇಳೆಯಲ್ಲಿ ಇನ್ನುಳಿದ ಬೇಡಿಕೆಗಳೊಂದಿಗೆ ರಾಜ್ಯದ ಎಲ್ಲಾ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಪೂರ್ಣ ಆರೋಗ್ಯ ತಪಾಸಣೆ ಇತ್ಯಾದಿ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ದೊರಕಿಸಿಕೊಳ್ಳಲು ಸಾಧ್ಯವಾಗಿದೆ.

7) ಗ್ರಾಚ್ಯುಟಿಗೆ ಸಂಬಂಧಿಸಿ ಇಂದು (ಫೆಬ್ರವರಿ01) ಮುಖ್ಯಮಂತ್ರಿಗಳ ಸಲಹೆಯಂತೆ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಮಾನ್ಯ ಸುಪ್ರಿಂ ಕೋರ್ಟಿನ ತೀರ್ಪಿನಂತೆ ಗ್ರಾಚ್ಯುಟಿ ಕಾಯ್ದೆ 1972 ರ ಪ್ರಕಾರ ಉಪಧನ (ಗ್ರಾಚ್ಯುಟಿ) ನೀಡುವ ಕುರಿತು ಮಾನ್ಯ ಮುಖ್ಯಮಂತ್ರಿಗಳ ಅನುಮೋದನೆಯ ಮೇರೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ.

ಈ ಹಿನ್ನೆಲೆಯಲ್ಲಿ ಅಂಗನವಾಡಿ ನೌಕರರ ಸಂಘವು ಕಳೆದ ಹತ್ತು ದಿನಗಳಿಂದ ಹಮ್ಮಿಕೊಂಡಿರುವ ಶಾಂತಿಯುತ ಅನಿರ್ದಿಷ್ಟಾವಧಿ ಹೋರಾಟವನ್ನು ಹಿಂಪಡೆದಿದೆ.

ಹೋರಾಟದ ಸಂದರ್ಭದಲ್ಲಿ ಸಂಘಟನೆಯ ಬೇಡಿಕೆಗಳ ಈಡೇರಿಕೆಗೆ ಸಹಾಯ ಸಹಕಾರ ನೀಡಿದವರಿಗೆ, ಬೆಂಬಲಿಸಿದವರಿಗೆ, ಮಾರ್ಗದರ್ಶನ ಮಾಡಿದ ನಾಡಿನ ಗಣ್ಯರಿಗೆ ಹಿತೈಷಿಗಳಿಗೆ ಸಂಘಟನೆಯು ಅಭಿನಂದನೆ ಸಲ್ಲಿಸಿದೆ.