ಉ.ಕ ಸುದ್ದಿಜಾಲ ಬೆಂಗಳೂರು :
ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರರಿಗೆ ಸಮನ್ವಯ ಸಾಧಿಸಿ ಕಾರ್ಖಾನೆಗಳು ಜರುಗಿಸುತ್ತಿರುವ ವ್ಯವಹಾರಗಳಲ್ಲಿ ಪಾರದರ್ಶಕತೆ ಮತ್ತು ಸಮರ್ಥತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಕ್ಕರೆ ಇಲಾಖೆಯಲ್ಲಿ ಮಾಹಿತಿ ಸಂಗ್ರಹಿಸಿ ಕ್ರೋಢೀಕರಿಸಿ ರೈತರಿಗೆ ಅನುಗುಣವಾಗುವಂತೆ ಹೊಸ ಆಪ್‌ನ್ನು ಮಾನ್ಯ ಕೈಮಗ್ಗ ಮತ್ತು ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾದ ಶ್ರೀ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ ಇಂದು ಬಿಡುಗಡೆ ಮಾಡಿದರು.
2022-23ನೇ ಹಂಗಾಮಿಗೆ ಕಬ್ಬು ಬೆಲೆ ನಿಗದಿ ಹಾಗೂ ಇತರೇ ಸಮಸ್ಯೆಗಳ ಕುರಿತು ಚರ್ಚೆಗಾಗಿ ಕಬ್ಬು ನಿಯಂತ್ರಣ ಮಂಡಳಿ ಜೊತೆ ವಿಕಾಸ ಸೌಧದಲ್ಲಿ ಸಭೆ ನಡೆಸಿದರು. ಈ ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ಅಂಶಗಳು ಇಂತಿವೆ.
ಸಕ್ಕರೆ ಕಾರ್ಖಾನೆಗಳು ಸತತವಾಗಿ ಪಾವತಿಸುತ್ತಿರುವ ಕಬ್ಬಿನ ಬಿಲ್ಲು, ಸಕ್ಕರೆ ಇಳುವರಿ, ಬಾಕಿ ಇರುವ ಕಬ್ಬಿನ ಬಿಲ್ಲಿನ ಮೊತ್ತ, ಕಬ್ಬು ಪ್ರದೇಶ, ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆ ಹಾಗೂ ಇತರ ಉಪಉತ್ಪನ್ನಗಳಿಂದ ಬರುವ ಆದಾಯ ಹಾಗೂ ಆದಾಯ ಹಂಚಿಕೆ ವಿವರಗಳನ್ನು, ಸಕ್ಕರೆ ಮತ್ತು ಕಾಕಂಬಿ ದಾಸ್ತಾನು ವಿವರಗಳನ್ನು ನಿಖರವಾಗಿ ಮತ್ತು ತ್ವರಿತವಾಗಿ ಪಡೆಯಲು ಆಪ್ ಹಾಗೂ ಸಾಫ್ಟವೇರ್ ಬಿಡುಗಡೆ ಮಾಡಲಾಗಿದೆ.
ರೈತರ ಸಮಸ್ಯೆಗೆ ಶೀಘ್ರ ಸ್ಪಂದಿಸಲು ಸಕ್ಕರೆ ಇಲಾಖೆಗೆ ಕಾಲ್ ಸೆಂಟರ್ ಆರಂಭಿಸಲು ತೀರ್ಮಾನ :
ರಾಜ್ಯದಲ್ಲಿ 2021-22ನೇ ಸಾಲಿನಲ್ಲಿ 72 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯವನ್ನು ಕೈಗೊಂಡಿರುತ್ತವೆ. ಸದರಿ ಹಂಗಾಮಿಗೆ 622.26 ಲಕ್ಷ ಮೆ.ಟನ್ ಕಬ್ಬನ್ನು ನುರಿಸಿ, 59,78 ಲಕ್ಷ ಮೆ.ಟನ್ ಸಕ್ಕರೆಯನ್ನು ಉತ್ಪಾದಿಸಿ, ಸಕ್ಕರೆ ಕಾರ್ಖಾನೆಗಳು, ರೂ.19,919.90 ಕೋಟಿ ಪಾವತಿಸಿದೆ, ಬಾಕಿ ಮೊತ್ತ ರೂ.2.49 ಕೋಟಿಗಳಷ್ಟು ಇರುತ್ತದೆ.
ಈ ತಿಂಗಳ ಅಂತ್ಯಕ್ಕೆ ಒಂದು ಕಾರ್ಖಾನೆ ಹಣವನ್ನು ಬಾಕಿ ಉಳಿಸಿಕೊಂಡಿದ್ದು, ಈ ತಿಂಗಳ ಅಂತ್ಯದಲ್ಲಿ ಹಣ ಪಾವತಿಸುವುದಾಗಿ ಸರಕಾರಕ್ಕೆ ತಿಳಿಸಿದೆ. ಈ ಹಿನ್ನಲೆಯಲ್ಲಿ ಹೊಸ ಹಂಗಾಮು ಪ್ರಾರಂಭವಾಗುವ ಮೊದಲೇ ಸರಕಾರ ಕಳೆದ ಎರಡು ವರ್ಷಗಳಲ್ಲಿ ಶೇ.100ರಷ್ಟು ಹಣ ಪಾವತಿಸಲು ಕ್ರಮವಹಿಸಿದೆ. ಈ ಹಿನ್ನಲೆಯಲ್ಲಿ ಸಚಿವರ ಮತ್ತು ಸರಕಾರದ ಸಾಧನೆಗೆ ಸಭೆಯಲ್ಲಿದ್ದ ಮಂಡಳಿಯ ಸದಸ್ಯರು ಅಭಿನಂದಿಸಿದರು.
ಇಲಾಖೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೂ ಈ ಕಾಲ್ ಸೆಂಟರ್ ಮೂಲಕ ಇಲಾಖೆಗೆ ಹೋಗಿ, 24 ಗಂಟೆಗಳೊಳಗೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ಒದಗಿಸುವ ಕಾರ್ಯ ಮಾಡಲಾಗುವುದು
ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಫ್ ಆರ್ ಪಿ ಯಲ್ಲಿ ರಾಜ್ಯ ಸರ್ಕಾರ ಕೂಡ ಒಂದಷ್ಟು ಮೊತ್ತವನ್ನು ಹೆಚ್ಚುವರಿಯಾಗಿ ಸೇರಿಸಿ ನೀಡಬೇಕೆಂಬುದು ರೈತ ಮುಖಂಡ ಬೇಡಿಕೆಯಾಗಿದ್ದು, ಈ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದು ಸಭೆಯ ಪ್ರಮುಖ ಅಂಶಗಳೊಂದಿಗೆ ಮಾನ್ಯ ಮುಖ್ಯಮಂತ್ರಿಗಳನ್ನು ಶೀಘ್ರದಲ್ಲೇ ಭೇಟಿಯಾಗುವುದಾಗಿ ಸಚಿವರು ತಿಳಿಸಿದರು.
ಸಕ್ಕೆರೆ ಇಲಾಖೆಯಲ್ಲಿನ ಸಿಬ್ಬಂದಿಗಳ ಕೊರತೆ ನೀಗಿಸಲು ಸಚಿವರೇ ಮುತುವರ್ಜಿ ವಹಿಸಿ ಶೀಘ್ರದಲ್ಲೇ ನೇಮಕಾತಿ ಆರಂಭ ಮಾಡುವ ಭರವಸೆ ನೀಡಿದರು.