ಉ.ಕ ಸುದ್ದಿಜಾಲ ಬೆಳಗಾವಿ :
ಪ್ರತಿವರ್ಷದಂತೆ ವಿಧಾನಮಂಡಳ ಚಳಿಗಾಲ ಅಧಿವೇಶನದಲ್ಲಿ ಭಾಗವಹಿಸುವ ಸಚಿವರು, ಶಾಸಕರು, ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ಸೂಕ್ತವಾದ ವಸತಿ, ಊಟೋಪಹಾರ ಹಾಗೂ ಸಾರಿಗೆ ಸೌಕರ್ಯಗಳನ್ನು ಒದಗಿಸಬೇಕು. ಇದಲ್ಲದೇ ವಿಧಾನಮಂಡಳದ ಕಲಾಪಗಳನ್ನು ಸುಗಮವಾಗಿ ನಡೆಸಲು ಅಗತ್ಯವಿರುವ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿಧಾನಮಂಡಳ ಚಳಿಗಾಲ ಅಧಿವೇಶನ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಮತ್ತು ವಿವಿಧ ಸಮಿತಿಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಧಿವೇಶನ ಸಂದರ್ಭದಲ್ಲಿ ಯಾವುದೇ ರೀತಿಯ ಅವ್ಯವಸ್ಥೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.
ಏನೇ ಸಮಸ್ಯೆಗಳಿದ್ದರೆ ಅಥವಾ ಹೆಚ್ಚಿನ ಅನುಕೂಲತೆ ಬೇಕಾದರೆ ತಮ್ಮ ಅಥವಾ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮಿತಿಗಳು ತಮಗೆ ವಹಿಸಲಾಗಿರುವ ಜವಾಬ್ದಾರಿಗಳನ್ನು ನಿಭಾಯಿಸಬೇಕು.
ಸಚಿವರು, ಶಾಸಕರು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು, ಗಣ್ಯರು ಸೇರಿದಂತೆ ಸಾವಿರಾರು ಜನರು ಆಗಮಿಸುತ್ತಾರೆ. ಆದ್ದರಿಂದ ಉತ್ತಮ ಹಾಗೂ ಗುಣಮಟ್ಟದ ಆಹಾರ, ವಸತಿ, ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು.
ಮದುವೆ ಸಮಾರಂಭಗಳು ಅದೇ ಸಮಯದಲ್ಲಿ ಇರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರದ ಕೆಲವು ನಿರ್ದಿಷ್ಟ ಹೋಟೆಲ್ ಗಳಲ್ಲಿ ಸಾರ್ವಜನಿಕರಿಗೆ ಶೇ.10 ರಷ್ಟು ಅವಕಾಶ ಕಲ್ಪಿಸಬೇಕು.
ಈ ಬಗ್ಗೆ ಮುಂಚಿತವಾಗಿ ಹೋಟೆಲ್ ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಬೇಕು ಎಂದು ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್ ತಿಳಿಸಿದರು.
ವಸತಿ, ಊಟೋಪಹಾರ ಮತ್ತು ಸಾರಿಗೆ ವ್ಯವಸ್ಥೆಯನ್ನು ಕಳೆದ ಬಾರಿಯಂತೆಯೇ ಮುಂದುವರಿಸಬೇಕು. ಕೆಲವು ಹೊಸ ಹೊಸ ಬೇಡಿಕೆಗಳಿರಬಹುದು. ಆದರೆ ಪ್ರತಿವರ್ಷದ ಪದ್ಧತಿಯನ್ನು ಪಾಲಿಸಬೇಕು ಎಂದು ನಿರ್ದೇಶನ ನೀಡಿದರು.
ಮುದ್ರಣ, ಲೇಖನ ಸಾಮಗ್ರಿಗಳನ್ನು ಅಗತ್ಯತೆ ಆಧರಿಸಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿಯೇ ಲಭ್ಯವಾಗಿಟ್ಟುಕೊಳ್ಳಬೇಕು.
ಸುವರ್ಣ ವಿಧಾನಸೌಧ, ಸಚಿವರು, ಶಾಸಕರು, ಅಧಿಕಾರಿಗಳು, ಸಿಬ್ಬಂದಿ ತಂಗುವ ಹೋಟೆಲ್ ಗಳ ಬಳಿ ತುರ್ತು ವೈದ್ಯಕೀಯ ಸೌಲಭ್ಯ ಒದಗಿಸಲು ತಂಡಗಳನ್ನು ನಿಯೋಜಿಸಬೇಕು ಎಂದರು.
ಹಿನ್ನೆಲೆಯಲ್ಲಿ ಸಂಪೂರ್ಣ ವಿಧಾನಸೌಧ ಕಾಣಿಸುವಂತಹ ಸೆಲ್ಫಿ ಸ್ಪಾಟ್ ನಿಗದಿಪಡಿಸಬೇಕು. ಅಧಿವೇಶನ ಕಲಾಪ ವೀಕ್ಷಣೆಗೆ ಆಗಮಿಸುವ ಜನರಿಗೆ ಇದೊಂದು ಸ್ಮರಣೀಯ ಅವಕಾಶವಾಗಬೇಕು ಎಂದು ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್ ಹೇಳಿದರು.
ಸುವರ್ಣ ಸೌಧ ಮುಂಭಾಗ ಸುಂದರ ಉದ್ಯಾನ ನಿರ್ಮಾಣಕ್ಕೆ ಸಭಾಪತಿ ಹೊರಟ್ಟಿ ಸೂಚನೆ :
ಅಧಿವೇಶನ ಸಂದರ್ಭದಲ್ಲಿ ವಿಧಾನಸೌಧದ ಹೊರಗಡೆ ಆವರಣದಲ್ಲಿ ಚಾಲಕರು, ಇತರೆ ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕು. ಸಾಧ್ಯವಾದರೆ ಕೂಪನ್ ನೀಡಬಹುದು ಎಂದು ಬಸವರಾಜ್ ಹೊರಟ್ಟಿ ಹೇಳಿದರು.
ಕಲಾಪ ವೀಕ್ಷಣೆಗೆ ಆಗಮಿಸುವ ಶಾಲಾ ಮಕ್ಕಳ ಬಸ್ ಗಳಿಗೆ ವಿಧಾನಸೌಧದ ಒಳಗಡೆಯ ಮುಖ್ಯದ್ವಾರದವರೆಗೆ ಅವಕಾಶ ಕಲ್ಪಿಸಬೇಕು ಎಂದು ಪೊಲೀಸ್ ಇಲಾಖೆಯ ಆಯುಕ್ತರಿಗೆ ತಿಳಿಸಿದರು.
ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಸುಂದರ ಉದ್ಯಾನ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ಮತ್ತು ಲೋಕೋಪಯೋಗಿ ಇಲಾಖೆಯವರು ಪರಿಶೀಲನೆ ನಡೆಸಿ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಈಗಾಗಲೇ ಅನುಮೋದನೆಯಾಗಿರುವ ಉದ್ಯಾನ ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕು. ಈ ಬಗ್ಗೆ ಒಂದು ವಾರದೊಳಗೆ ವರದಿ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಡಿಸೆಂಬರ್ ನಲ್ಲಿ ಮದುವೆ ಸಮಾರಂಭಗಳು ಇರುವುದರಿಂದ ಕೆಲವು ವಸತಿಗೃಹಗಳಲ್ಲಿ ಸಾರ್ವಜನಿಕರಿಗೂ ಸ್ವಲ್ಪ ಪ್ರಮಾಣದಲ್ಲಿ ಕೊಠಡಿಗಳನ್ನು ಒದಗಿಸಲು ಅವಕಾಶ ಕಲ್ಪಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಒತ್ತಾಯಿಸಿದರು.
ಅಧಿವೇಶನದ ಒಟ್ಟಾರೆ ಪೂರ್ವಸಿದ್ಧತೆ ಕುರಿತು ಸಭೆಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ವಸತಿ, ಊಟೋಪಹಾರ ಹಾಗೂ ಸಾರಿಗೆ ವ್ಯವಸ್ಥೆ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಸಮಿತಿಗಳನ್ನು ರಚಿಸಲಾಗಿದ್ದು, ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಳೆದ ವರ್ಷ ಖಾಸಗಿ ವಾಹನಗಳನ್ನು ಪಡೆಯದೇ ಸರಕಾರಿ ವ್ಯವಸ್ಥೆ ಬಳಸಿಕೊಂಡು ಕಾರ್ಯನಿರ್ವಹಿಸಲಾಗಿದೆ.
ಕಳೆದ ಬಾರಿಯಂತೆ ಶಾಸಕರ ಆಪ್ತ ಸಹಾಯಕರು, ಗನ್ ಮ್ಯಾನ್ ಮತ್ತಿತರರಿಗೆ ಪಾವತಿ ಆಧಾರದ ಮೇಲೆ ಕೆಲವೊಂದು ಹೋಟೆಲ್ ಗಳನ್ನು ನಿಗದಿಪಡಿಸಲಾಗಿತ್ತು. ಈ ಬಾರಿಯೂ ಕೂಡ ಅದೇ ರೀತಿ ಮಾಡಲಾಗುವುದು.
ಅಧಿವೇಶನದ ವಸತಿ ಹಂಚಿಕೆ, ಅಧಿಕಾರಿಗಳ ವಿವರ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಒಳಗೊಂಡ ಕ್ಯೂಆರ್ ಕೋಡ್ ಪುಸ್ತಿಕೆಯ ಸಾಫ್ಟ್ ಪ್ರತಿಯನ್ನು ಪ್ರತಿಯೊಬ್ಬರಿಗೂ ವಿತರಿಸಲಾಗುವುದು. ಇದಲ್ಲದೇ ಕ್ಯೂಆರ್ ಕೋಡ್ ಅನ್ನು ಸುವರ್ಣ ವಿಧಾನಸೌಧದ ಮೂಲೆ ಮೂಲೆಗಳಲ್ಲಿ ಪ್ರದರ್ಶಿಸಲಾಗುವುದು.
ಆರೋಗ್ಯ ಸಮಿತಿಯು ಸುವರ್ಣ ವಿಧಾನಸೌಧ, ವಸತಿಗೃಹಗಳು ಸೇರಿದಂತೆ ಪ್ರತಿಯೊಂದು ಕಡೆಗಳಲ್ಲಿ ವೈದ್ಯಕೀಯ ತಂಡಗಳನ್ನು ಮತ್ತು ಆಂಬ್ಯುಲೆನ್ಸ್ ಗಳನ್ನು ನಿಯೋಜಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪೊಲೀಸ್ ಆಯುಕ್ತರಾದ ಎಸ್.ಎನ್.ಸಿದ್ದರಾಮಪ್ಪ ಮಾತನಾಡಿ, ಪೊಲೀಸ್ ವಸತಿಗೆ ವಿಶೇಷ ತಾತ್ಕಾಲಿಕ ಟೌನ್ ಷಿಪ್ ನಿರ್ಮಿಸಿ ಕೊಡಲಾಗುತ್ತಿದೆ. ಒಟ್ಟು 22 ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದ್ದು, ಜಿಲ್ಲಾಡಳಿತದ ಸಮನ್ವಯದೊಂದಿಗೆ ಸಮರ್ಪಕ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ, ವಿಧಾನಸಭೆ ಕಾರ್ಯದರ್ಶಿವಿಶಾಲಾಕ್ಷಿ, ಜಿಲ್ಲಾ ಪಙಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ ಮತ್ತಿತರರು ಉಪಸ್ಥಿತರಿದ್ದರು.
ವಸತಿ, ಊಟ, ಸಾರಿಗೆ, ಆರೋಗ್ಯ ಸೇರಿದಂತೆ ವಿವಿಧ ಸಮಿತಿಗಳ ಮುಖ್ಯಸ್ಥರು, ಇದುವರೆಗಿನ ಸಿದ್ಧತೆಗಳನ್ನು ಸಭೆಯಲ್ಲಿ ವಿವರಿಸಿದರು.