ಉ.ಕ ಸುದ್ದಿಜಾಲ‌ ಬೆಳಗಾವಿ :

ಚಿನ್ನದ ಅಂಗಡಿ ಮಾಲೀಕರಿಂದ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಆದಾಯ ತೆರಿಗೆ ಅಧಿಕಾರಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಡಳಗಾಬಿ ಜಿಲ್ಲೆಯ ನಿಪ್ಪಾಣಿಯ ಆದಾಯ ತೆರಿಗೆ ಅಧಿಕಾರಿ ಅವಿನಾಶ ಟೊಣಪೆ ಲಂಚದ ಹಣದ ಸಮೇತ ಸಿಕ್ಕಿಬಿದ್ದವರು. ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದ ಪರಶುರಾಮ ಬಂಕಾಪುರ ದೂರು ನೀಡಿದವರು ಎಂದು ಪೊಲೀಸರು ತಿಳಿಸಿದ್ದಾರೆ.

ಚಿನ್ನದ ವ್ಯಾಪಾರಿ ‍ಪರಶುರಾಮ ಅವರು ಆದಾಯ ತೆರಿಗೆ ವಂಚಿಸಿದ್ದಾರೆ ಎಂದು ಆರೋಪಿಸಿ, ಅಧಿಕಾರಿ ಅವಿನಾಶ ಕಿರುಕುಳ ನೀಡುತ್ತಿದ್ದರು. ದಾಳಿಯಿಂದ ತಪ್ಪಿಸಿಕೊಳ್ಳಲು 10 ಲಕ್ಷ ಲಂಚ ಕೊಡಲು ಕೇಳಿದ್ದರು. ಹಣಕ್ಕೆ ಪದೇ ಪದೇ ಪೀಡಿಸುತ್ತಿದ್ದರು. ಇದರಿಂದ ಬೇಸತ್ತ ಪರಶುರಾಮ ಪೊಲೀಸರಿಗೆ ದೂರು ನೀಡಿದ್ದರು. ಐಟಿ ಅಧಿಕಾರಿಯೇ ಲಂಚ ಕೇಳಿದ್ದರಿಂದ ಲಂಚ ಸಮೇತ ಹಿಡಿಯಲು ಬಲೆ ಬೀಸಿದ್ದೆವು ಎಂದು ಮಾರ್ಕೆಟ್‌ ಠಾಣೆ ಎಸಿಪಿ ಸದಾಶಿವ ಕಟ್ಟಿಮನಿ ತಿಳಿಸಿದರು.

ಬೆಳಗಾವಿ ನಗರದ ದಂತ ವಿಜ್ಞಾನ ಕಾಲೇಜು ಆವರಣಕ್ಕೆ ಬಂದರೆ ಹಣ ಕೊಡುವುದಾಗಿ ದೂರುದಾರ ತಿಳಿಸಿದ್ದರು. ಸದ್ಯಕ್ಕೆ 40 ಸಾವಿರ ತೆಗೆದುಕೊಳ್ಳಿ ಎಂದು ಲಂಚದ ಹಣ ಅಧಿಕಾರಿ ಕೈಗೆ ಕೊಟ್ಟರು. ಇದೇ ಸಮಯಕ್ಕೆ ದಾಳಿ ಮಾಡಿದ ಪೊಲೀಸರು ಹಣದ ಸಮೇತ ಅಧಿಕಾರಿ ವಶಕ್ಕೆ ಪಡೆದರು ಎಂದರು.

ಆರೋಪಿಯು ಆದಾಯ ತೆರಿಗೆ ಇಲಾಖೆಗೆ ಸೇರಿದ್ದರಿಂದ ಈ ಪ್ರಕರಣವನ್ನು ನಾವು ತನಿಖೆ ಮಾಡಬೇಕೆ ಅಥವಾ ಆದಾಯ ತೆರಿಗೆ ಇಲಾಖೆಗೆ ವರ್ಗಾಯಿಸಬೇಕೆ ಎಂಬ ಬಗ್ಗೆ ಯೋಚಿಸಿ ಕ್ರಮ ವಹಿಸಲಾಗುವುದು ಎಂದರು.

ಇನ್ನೊಬ್ಬ ಅಧಿಕಾರಿ ಈ ಬೆಳವಣಿಗೆಯನ್ನು ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಮಾರ್ಕೆಟ್‌ ಎಸಿಪಿ ನಾರಾಯಣ ಭರಮನಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.