ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಎರಡೂ ಕ್ಷೇತ್ರಗಳಲ್ಲಿ ತೀವ್ರ ಪ್ರತಿಷ್ಠೆ ಏರ್ಪಟ್ಟಿದೆ. ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ದು, ಎರಡೂ ಕಡೆ ಒಟ್ಟು 2,000 ಪೊಲೀಸರನ್ನು ಭದ್ರತೆಗೆ ನಿಯೋಜಿಸಿದೆ.
ಬೆಳಗಾವಿಯ ಆರ್‌ಪಿಡಿ ಕಾಲೇಜಿನಲ್ಲಿ ಬೆಳಗಾವಿ ಕ್ಷೇತ್ರ ಹಾಗೂ ಚಿಕ್ಕೋಡಿಯ ಆರ್.ಡಿ. ಕಾಲೇಜಿನಲ್ಲಿ ಚಿಕ್ಕೋಡಿ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಮಂಗಳವಾರ (ಜೂನ್ 4) ಬೆಳಿಗ್ಗೆ 6ರಿಂದ ನಡೆಯಲಿದ್ದು, ಬೆಳಿಗ್ಗೆ 8ಕ್ಕೆ ಮತ ಎಣಿಕೆ ಶುರುವಾಗಲಿದೆ.
ಈ ಎರಡೂ ಕಾಲೇಜುಗಳಲ್ಲಿನ ಸ್ಟ್ರಾಂಗ್‌ರೂಂಗಳಲ್ಲಿ ಮತಯಂತ್ರಗಳು ಬೆಚ್ಚಗೆ ಕುಳಿತಿವೆ. ಈಗಾಗಲೇ 144 ಕಲಂ ಅಡಿ ಇವುಗಳ ಸುತ್ತ ನಿಷೇಧಾಜ್ಞೆ ಹೇರಲಾಗಿದೆ. ಮತ ಎಣಿಕೆಗೆ 48 ಗಂಟೆ ಮುಂಚಿತವಾಗಿ ಮದ್ಯ ಮಾರಾಟ ಹಾಗೂ ಸಾಗಣೆ ನಿರ್ಬಂಧಿಸಲಾಗಿದೆ.
ಬೆಳಗಾವಿ ನಗರದಲ್ಲಿ 1,400 ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಇದರಲ್ಲಿ ಐದು ಕೆಎಸ್‌ಆರ್‌ಪಿ ತುಕಡಿಗಳೂ ಸೇರಿವೆ. 300 ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ನಾಲ್ಕು ಡ್ರೋಣ್ ಕ್ಯಾಮೆರಾಗಳ ಮೂಲಕ ಕಣ್ಗಾವಲು ಮಾಡಲಾಗುತ್ತಿದೆ.
ಬೆಳಗಾವಿ ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ನೇತೃತ್ವದಲ್ಲಿ ಖಾಕಿ ಪಡೆ ಸೋಮವಾರವೇ ಇದರ ಸಕಲ ಸಿದ್ಧತೆ ಮಾಡಿಕೊಂಡಿತು.
ಆರ್‌ಪಿಡಿ ಕಾಲೇಜಿನ ಸುತ್ತ ಅಂಗಡಿಗಳನ್ನು ಮುಚ್ಚಲಾಗಿದೆ. ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ, ಮೆರವಣಿಗೆ ನಡೆಸುವ ಸರ್ಕಲ್‌ಗಳಲ್ಲಿಯೂ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಇಬ್ಬರು ಡಿಸಿಪಿ ನೇತೃತ್ವದಲ್ಲಿ 13 ಇನ್‌ಸ್ಪೆಕ್ಟರ್‌ಗಳು ಕಾರ್ಯನಿರ್ವಹಿಸಲಿದ್ದಾರೆ. ಸುಗಮ ಸಂಚಾರ, ಪಾರ್ಕಿಂಗ್ ಸೇರಿದಂತೆ ಪ್ರತಿಯೊಂದು ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿರುತ್ತದೆ ಎಂದು ಯಡಾ ಮಾರ್ಟಿನ್ ತಿಳಿಸಿದ್ದಾರೆ.
ಚಿಕ್ಕೋಡಿ ಪಟ್ಟಣದ ಆರ್.ಡಿ. ಕಾಲೇಜಿನಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ ಚುನಾವಣಾಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಜೂನ್ 4ರಂದು ಬೆಳಿಗ್ಗೆ 8ಕ್ಕೆ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ.
ಜೂನ್ 3ರಿಂದ 5ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶ ಹೊರಡಿಸಿದ್ದಾರೆ. ಜೂನ್ 4ರ ಬೆಳಿಗ್ಗೆ 6 ಗಂಟೆಯಿಂದ ಜೂನ್ 5ರ ಬೆಳಿಗ್ಗೆ 6ರ ವರೆಗೆ ಮದ್ಯಪಾನ ವ್ಯಾಪಾರ, ವಹಿವಾಟು ನಿಷೇಧಿಸಲಾಗಿದೆ ಎಂದು ಚುನಾವಣಾಧಿಕಾರಿ ರಾಹುಲ್ ಶಿಂಧೆ ತಿಳಿಸಿದ್ದಾರೆ.
ಮತ ಎಣಿಕೆ ಕೇಂದ್ರದ ಬಳಿಯಲ್ಲಿ 300 ಸಿಬ್ಬಂದಿ ಹಾಗೂ ಹೊರಗಡೆಗೆ 300 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಇವರಲ್ಲಿ 3 ಡಿವೈಎಸ್ಪಿ, 9 ಸಿಪಿಐ, 32 ಪಿಎಸ್‍ಐ, 65 ಎಎಸ್‍ಐ, 121 ಹೆಡ್ ಕಾನ್‌ಸ್ಟೆಬಲ್, 284 ಪೊಲೀಸ್ ಸಿಬ್ಬಂದಿ ಸೇರಿದಂತೆ 2 ಕೆಎಸ್‌ಆರ್‌ಪಿ ತುಕಡಿ, 4 ಡಿಆರ್ ತುಕಡಿಗಳನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದೆ.
ಪಟ್ಟಣದ ನಾಲ್ಕೂ ಕಡೆಗೆ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದ್ದು, ನಿಗದಿತ ಸ್ಥಳದಲ್ಲಿಯೇ ವಾಹನಗಳ ಪಾರ್ಕಿಂಗ್ ಮಾಡಲು ಸೂಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ತಿಳಿಸಿದ್ದಾರೆ.