ಉ.ಕ ಸುದ್ದಿಜಾಲ ಬೆಳಗಾವಿ :
ಚಳಿಗಾಲದ ಅಧಿವೇಶನದ ಅವಧಿಯ ಮುನ್ನ ಎಲ್ಲ ಇಲಾಖೆಗಳು ಯಾವುದೇ ನೆಪ ಹೇಳದೆ ಕೂಡಲೇ ಎಸ್‌ಸಿಪಿ/ ಟಿಎಸ್‌ಪಿ ಅನುದಾನ ಸಮರ್ಪಕ ಬಳಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಡಿ.9) ನಡೆದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಇಲಾಖಾವಾರು ಅನುದಾನ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಾರಿ ನೀರಾವರಿ ಇಲಾಖೆಗೆ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಗಳಿಗೆ 43 ಕೋಟಿ ಅನುದಾನ ಬಿಡುಗಡೆ ಆಗಿದೆ. ಈ ವರೆಗೂ ಯಾವುದೇ ರೀತಿಯಲ್ಲಿ ಪ್ರಗತಿ ಇಲ್ಲ ಕೂಡಲೇ ಬಿಡುಗಡೆಯಾದ ಅನುದಾನವನ್ನು ಕೂಡಲೇ ಬಳಕೆ ಮಾಡಬೇಕು ಎಂದು ತಿಳಿಸಿದರು.
ಈಗಾಗಲೇ 43 ಕೋಟಿ ಅನುದಾನ ಬಿಡುಗಡೆ ಮಾಡಿ 5 ತಿಂಗಳು ಕಳೆದಿವೆ. ವಿವಿಧ ಕಾಮಗಾರಿಗಳ ಯೋಜನೆಗಳನ್ಜು ರೂಪಿಸಿ, ಅನುದಾನ ಹಂಚಿಕೆ ಮೂಲಕ ಟೆಂಡರ್ ಆಹ್ವಾನಿಸಿ, ಸಮರ್ಪಕ ಬಳಕೆ ಮಾಡಬೇಕು ಎಂದು ನೀರಾವರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರವಾಸ ಕೈಗೊಳ್ಳಲು ಸೂಚನೆ, ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಎಸ್.ಸಿ. ಪಿ/ಟಿ.ಎಸ್.ಪಿ ಮಕ್ಕಳಿಗೆ ಪ್ರವಾಸ ಕೈಗೊಳ್ಳಬೇಕು ಡಿಡಿಪಿಐ ಕೂಡಲೇ ಮಾಹಿತಿ ನೀಡಿ, ಕೆ.ಎಸ್.ಆರ್.ಟಿ.ಸಿ ಗೆ ಹಣ ಬಿಡುಗಡೆ ಮಾಡಿ, ಮಕ್ಕಳಿಗೆ ಪ್ರವಾಸ ಕಾರ್ಯಕ್ರಮ ಕೈಗೊಳ್ಳಬೇಕು ಎಂದು ಪ್ರವಸೋದ್ಯಮ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಸ್.ಸಿ.ಪಿ/ ಟಿ.ಎಸ್.ಪಿ ಫಲಾನುಭವಿಗಳು ಕಡಿಮೆ ಇದ್ದು, ಅನುದಾನ ಹೆಚ್ಚು ಇರುವ ಕಾರಣ ನಿಗದಿತ ಗುರಿ ಸಾಧಿಸುವಲ್ಲಿ ತೊಂದರೆ ಆಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ವಿವರಿಸಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರೋತ್ಸಾಹ ಧನ ಹಾಗೂ ಸ್ಕಾಲಾರ್ ಶಿಪ್ ಗಾಗಿ 3 ಕೋಟಿ ಅನುದಾನ ಬಂದಿದೆ. ಕೂಡಲೇ ವಿದ್ಯಾರ್ಥಿಗಳ ಖಾತೆಗೆ ಹಣ ವರ್ಗಾಯಿಸುವ ಮೂಲಕ ಅನುದಾನ ಬಳಕೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ದರ್ಶನ್ ಹೆಚ್.ವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ, ಡಿಸಿಪಿ ರವೀಂದ್ರ ಗಡಾದಿ, ಉಪ ವಿಭಾಗಾಧಿಕಾರಿ ಬಲರಾಮ ಚವ್ಹಾಣ, ಶಶಿಧರ ಬಗಲಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಉಮಾ ಸಾಲಿಗೌಡರ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.