ಉ.ಕ ಸುದ್ದಿಜಾಲ ಬೆಳಗಾವಿ :

ಓಮಿಕ್ರಾನ್ ಹರಡುವ ಭೀತಿ ಹಿನ್ನೆಲೆ ಬೆಳಗಾವಿ ಜಿಲ್ಲಾಧಿಕಾರಿಗಳ ಮಹತ್ವದ ಆದೇಶ, ಯಾವುದೇ ಜಾತ್ರೆ,ಉತ್ಸವ ನಡೆಸದಂತೆ ಆದೇಶ ಹೊರಡಿಸಿದ ಬೆಳಗಾವಿ ಜಿಲ್ಲಾಧಿಕಾರಿ, ಎಂ ಜಿ ಹಿರೇಮಠರಿಂದ ದೇವರ ದರ್ಶನಕ್ಕೆ ಬ್ರೇಕ್, ಇಂದಿನಿಂದ ಮುಂದಿನ ಆದೇಶದವರೆಗೆ ಯಾವುದೇ ದೇವಸ್ಥಾನದಲ್ಲಿ ಸಿಗೋದಿಲ್ಲ‌ ಸಾರ್ವಜನಿಕ ದರ್ಶನ.

ಈ ಕುರಿತು ಪ್ರಕಟಣೆ ಹೊರಡಿಸಿದ ಬೆಳಗಾವಿ ಜಿಲ್ಲಾಧಿಕಾರಿ, ಕೊರೊನಾ, ಒಮಿಕ್ರಾನ್ ಹರಡುವಿಕೆಯನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕರ ಮತ್ತು ಭಕ್ತಾಧಿಗಳ ಆರೋಗ್ಯ ಹಿತದೃಷ್ಟಿಯಿಂದ ಬೆಳಗಾವಿ ಜಿಲ್ಲೆಯ ಪ್ರಮುಖ ದೇವಸ್ಥಾನಗಳ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧಿಸಲಾಗಿದೆ‌. ನೆರೆಯ ರಾಜ್ಯವಾದ ಮಹಾರಾಷ್ಟ್ರದಲ್ಲಿ ತೀವ್ರತರವಾಗಿ ಕೊರೊನಾ ಹರಡುತ್ತಿರುವುದರಿಂದ ಮಹಾರಾಷ್ಟ್ರ ರಾಜ್ಯದ ಗಡಿ ಜಿಲ್ಲೆಯಾದ ಬೆಳಗಾವಿಯ ಹಲವಾರು ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಮಹಾರಾಷ್ಟ್ರ ರಾಜ್ಯದಿಂದ ಅತ್ಯಂತ ಗಣನೀಯ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಭಕ್ತಾಧಿಗಳು ಬೆಳಗಾವಿ ಜಿಲ್ಲೆಗೆ ಆಗಮಿಸುತ್ತಾರೆ. ಇದರಿಂದ ವೈರಾಣು ಹರಡುವಿಕೆ ತಡೆಗೆಗಟ್ಟಲು  ಪರಿಣಾಮಕಾರಿಯಾಗಿ ಕೊರೊನಾ ನಿಯಂತ್ರಿಸಬೇಕಿದೆ. ಇತ್ತ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಬಣದ ಹುಣ್ಣುಮೆ ಜಾತ್ರೆಗೆ ಸುಮಾರು 5ರಿಂದ 8 ಲಕ್ಷದವರೆಗೆ ಭಕ್ತಾಧಿಗಳು ಸೇರುವ ನಿರೀಕ್ಷೆ ಇದೆ.

ಹೀಗಾಗಿ ಜನೆವರಿ 14ರಿಂದ 28ರವರೆಗೆ ಸವದತ್ತಿ ಶ್ರೀ ಯಲ್ಲಮ್ಮ‌ ದೇವಸ್ಥಾನ, ಶ್ರೀ ಜೋಗಳಭಾವಿ ಸತ್ತೆಮ್ಮ ದೇವಿಯ ದೇವಸ್ಥಾನ, ರಾಮದುರ್ಗ ತಾಲೂಕಿನ ಗೊಡಚಿ ವೀರಭದ್ರೇಶ್ವರ ದೇವಸ್ಥಾನ, ರಾಯಬಾಗದ ತಾಲೂಕಿನ‌ ಚಿಂಚಲಿ ಮಾಯಕ್ಕಾ ದೇವಸ್ಥಾನ,  ಬೆಳಗಾವಿಯ ಪಂತಬಾಳೇಕುಂದ್ರಿಯ ದತ್ತ ದೇವಸ್ಥಾನ, ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಶ್ರೀ ಹೊಳೆಮ್ಮ ದೇವಿ ದೇವಸ್ಥಾನ, ಕಾಗವಾಡ ತಾಲೂಕಿನ ಮಂಗಸೂಳಿಯ ಶ್ರೀ ಮಲ್ಲಯ್ಯ ದೇವಸ್ಥಾನ, ಅಥಣಿ ತಾಲೂಕಿನ  ಖಿಳೇಗಾವ್ ಶ್ರೀ ಬಸವೇಶ್ವರ ದೇವಸ್ಥಾನ ಹಾಗೂ ಕೊಕಟನೂರಿನ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಗಳಿಗೆ ಸಾರ್ವಜನಿಕ ದರ್ಶನ‌ ನಿಷೇಧಿಸಲಾಗಿದೆ‌ ಎಂದು ತಿಳಿಸಿದ್ದಾರೆ.