ಉ.ಕ ಸುದ್ದಿಜಾಲ ಬೆಳಗಾವಿ :

ಕಳೆದ ವರ್ಷ ರೈತರು ಸಕ್ಕರೆ ಕಾರ್ಖಾನೆಗಳಿಗೆ ಪೂರೈಸಿದ ಕಬ್ಬಿನ ಬಾಕಿ ಬಿಲ್ ಪಾವತಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಬಂದ ರೈತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಬಿಲ್‌ ಪಾವತಿಸದ ಕಾರ್ಖಾನೆ ಹಾಗೂ ಸ್ಪಷ್ಟ ಕ್ರಮ ವಹಿಸದ ಸಕ್ಕರೆ ಆಯುಕ್ತರ ವಿರುದ್ಧವೂ ಹರಿಹಾಯ್ದರು. ಜಿಲ್ಲಾಧಿಕಾರಿ ಅವರು ಶೀಘ್ರ ಸಭೆ ಕರೆದು ರೈತರ ಸಂಕಷ್ಟ ಪರಿಹರಿಸಬೇಕು ಎಂದೂ ಒತ್ತಾಯಿಸಿದರು.

ಅಡುಗೆ ಅನಿಲ ಸಿಲಿಂಡರ್, ಪಾತ್ರೆ, ಅಡುಗೆ ಸಾಮಗ್ರಿಗಳೊಂದಿಗೆ ಪ್ರತಿಭಟಿಸಿದ ಅವರು, ಕಬ್ಬಿನ ಬಿಲ್‌ ಪಾವತಿಸಲು ವಿಳಂಬ ಮಾಡುತ್ತಿರುವ ಕಾರ್ಖಾನೆಗಳ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಶಶಿಕಾಂತ ನಾಯಿಕ, ‘ಕರ್ನಾಟಕದಲ್ಲಿ 64 ಸಕ್ಕರೆ ಕಾರ್ಖಾನೆಗಳು ₹604 ಕೋಟಿ ಕಬ್ಬಿನ ಬಿಲ್‌ ಬಾಕಿ ಉಳಿಸಿಕೊಂಡಿವೆ. ಈ ಪೈಕಿ ಬೆಳಗಾವಿ ಜಿಲ್ಲೆಯ ಕಾರ್ಖಾನೆಗಳಲ್ಲಷ್ಟೇ ₹300 ಕೋಟಿ ಬಾಕಿ ಇದೆ.

ಸಕಾಲಕ್ಕೆ ಬಿಲ್‌ ಕೈಗೆಟುಕದ್ದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಈ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

ಮುಖಂಡ ಪ್ರಕಾಶ ನಾಯ್ಕ, ‘ಯಾವುದೇ ರೈತರು ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ 15 ದಿನಗಳ ಒಳಗೆ ಬಿಲ್‌ ಪಾವತಿಸಬೇಕೆಂಬ ನಿಯಮವಿದೆ. ಆದರೆ, ಬಹುತೇಕ ಕಾರ್ಖಾನೆಯವರು ಇದನ್ನು ಪಾಲಿಸುತ್ತಿಲ್ಲ. ಸರ್ಕಾರ ನೋಟಿಸ್‌ ಕೊಟ್ಟರೂ ಎಚ್ಚೆತ್ತುಕೊಂಡಿಲ್ಲ’ ಎಂದು ದೂರಿದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಚೂನಪ್ಪ ಪೂಜಾರಿ, ಚಾಮರಸ ಮಾಲಿಪಾಟೀಲ ಪಿ.ಎಸ್.ಬೋಗೂರ ನೇತೃತ್ವ ವಹಿಸಿದ್ದರು.