ಉ.ಕ ಸುದ್ದಿಜಾಲ ಉಡುಪಿ :

ಉಡುಪಿಯಲ್ಲಿ ಮತ್ತೊಮ್ಮೆ ಅಪರೂಪದ ಕರಿ ಚಿರತೆ ಯೊಂದು ಪತ್ತೆಯಾಗಿದೆ. ಬೇಟೆ ಅರಸಿ ಬಂದ ಈ ಚಿರತೆ ಬಾವಿಗೆ ಬಿದ್ದ ಸ್ಥಿತಿಯಲ್ಲಿ ಕಂಡು ಬಂದಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಂದರ್ತಿ ಸಮೀಪದ ಶಿರೂರು ಹೆಮ್ಮಣಿಕೆ ಎಂಬಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಶೇಖ‌ರ್ ಶೆಟ್ಟಿ ಎಂಬವರ ರಬ್ಬರ್ ತೋಟದ ಸಮೀಪವೇ ಇರುವ ಕೃಷ್ಣ ನಾಯ್ಕ ಎಂಬವರ ಜಾಗ ದಲ್ಲಿರುವ ತೆರೆದ ಬಾವಿಗೆ ತಡರಾತ್ರಿ ಕರಿ ಚಿರತೆ ಬಿತ್ತೆನ್ನಲಾಗಿದೆ.

ನಿನ್ನೆ ಸಂಜೆ ವೇಳೆಗೆ ಬಾವಿಯಲ್ಲಿ ಚಿರತೆ ಬಿದ್ದ ಬಗ್ಗೆ ತಿಳಿದ ತಕ್ಷಣ ಶೇಖರ್ ಶೆಟ್ಟಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಬಾವಿ ಸುತ್ತ ಬಲೆ ಹಾಕಿ ಕರಿ ಚಿರತೆ ರಕ್ಷಣೆಗೆ ಮುಂದಾದರು.

ಆದರೆ ಕಾರ್ಯಾಚರಣೆ ವೇಳೆ ಚಿರತೆ ಬಲೆಯಿಂದ ಸರಿದು ಸಮೀಪದ ತೋಟದೊಳಕ್ಕೆ ಓಡಿ ಹೋಯಿತೆನ್ನಲಾಗಿದೆ. ಈ ಮೂಲಕ ಕರಿ ಚಿರತೆ ಸುರಕ್ಷಿತವಾಗಿ ಬಾವಿಯಿಂದ ಮೇಲಕ್ಕೆ ಬಂದು ಕಾಡು ಪ್ರದೇಶ ಸೇರಿದೆ ಎಂದು ತಿಳಿದುಬಂದಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಪೂಜಾರಿ ನಿರ್ದೇಶನದಲ್ಲಿ ಶಂಕರ ನಾರಾಯಣ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ, ಉಪವಲಯ ಅರಣ್ಯಾಧಿ ಕಾರಿ ನಾಗರಾಜ ಮತ್ತು ಸಿಬ್ಬಂದಿ, ಸ್ಥಳೀಯರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.