ಉ.ಕ ಸುದ್ದಿಜಾಲ ಬೆಂಗಳೂರು : 

ಕಳೆದ ಬಾರಿಯ ಬಜೆಟ್ ಅನ್ನು ಶೇ.90 ರಷ್ಟು ಅನುಷ್ಠಾನ ಮಾಡಿದ್ದು, ಈ ಬಾರಿಯ ಬಜೆಟ್ ಅನ್ನೂ ಮುಂದೆ ನಾವೇ ಅಧಿಕಾರಕ್ಕೆ ಬಂದು ಅನುಷ್ಠಾನಕ್ಕೆ ತರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಇಂದು ವಿಧಾನ ಪರಿಷತ್ ನಲ್ಲಿ ಬಜೆಟ್ ಮೇಲಿನ ಸದಸ್ಯರ ಪ್ರಶ್ನೆಗಳಿಗೆ ಸುದೀರ್ಘವಾಗಿ ಉತ್ತರಿಸುತ್ತಾ ರಾಜ್ಯ ಮುಂಗಡ ಬಜೆಟ್ ಅನ್ನು ಸಮರ್ಥಿಸಿಕೊಂಡು ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು.‌ ಬಜೆಟ್ ಮೇಲೆ 14 ಜನ ಮಾತನಾಡಿದ್ದಾರೆ‌, ಹಲವಾರು ವಿಚಾರ ಹೇಳಿದ್ದಾರೆ. ಕೆಲವು ಅನುಷ್ಠಾನದ ಬಗ್ಗೆ, ಸಲಹೆ ಸೂಚನೆ ಕೊಟ್ಟಿದ್ದನ್ನು ಸ್ವಾಗತ ಮಾಡುತ್ತೇನೆ.

ರಾಜ್ಯದ ಒಟ್ಟಾರೆ ಹಣಕಾಸು ಸ್ಥಿತಿ, ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಕಾರ್ಯಕ್ರಮಗಳು, ವರ್ಷದ ಮುನ್ನೋಟದ ಅಂದಾಜು ಆದಾಯ, ವೆಚ್ಚ, ಅಭಿವೃದ್ಧಿಗೆ ಎಷ್ಟು ವೆಚ್ಚ ಮಾಡಬಹುದು ಎನ್ನುವ ಎಲ್ಲ ವಿಚಾರ ಬಜೆಟ್ ನಲ್ಲಿ ಮಂಡಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಅಗತ್ಯಕ್ಕೆ ತಕ್ಕಂತೆ ಬಜೆಟ್ ಮಾರ್ಪಾಡು :
ಆರು ವಲಯದಲ್ಲಿ ಬಜೆಟ್ ವಿಂಗಡಣೆ ಮಾಡಿದ್ದೇವೆ.‌ ರಾಜ್ಯದ ಆರ್ಥಿಕತೆಗೆ ಚೌಕಟ್ಟು ಹಾಕಿಕೊಳ್ಳಬೇಕು. ಆರ್ಥಿಕ ಶಿಸ್ತು ಇರಲು ಕಾನೂನು ರಚಿಸಲಾಗಿದೆ. ಆರ್ಥಿಕತೆಯಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಅದಕ್ಕೆ ತಕ್ಕಂತೆ ನಾವು ಬಜೆಟ್ ಮಾರ್ಪಾಡು ಮಾಡಿದ್ದೇವೆ. ಸಾಮಾಜಿಕ ಮೂಲಸೌಕರ್ಯ ವೆಚ್ಚ ಹೆಚ್ಚಾದರೆ ಆರ್ಥಿಕ ವೃದ್ಧಿಗೂ ವೆಚ್ಚ ಹೆಚ್ಚಳ ಆಗಲಿದ್ದು, ಎರಡನ್ನೂ ಹೊಂದಿಸುವುದು ಸವಾಲಾಗಿದೆ‌ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ವೆಚ್ಚವು ಖರ್ಚಲ್ಲ, ಹೂಡಿಕೆ :
ಸಾಮಾಜಿಕ ತಳ ಸಮುದಾಯಕ್ಕೆ ವೆಚ್ಚ ಮಾಡುವುದು ಖರ್ಚಲ್ಲ. ಅದು ಸದೃಢ ಆರೋಗ್ಯಕರ, ಶಿಕ್ಷಣಯುಕ್ತ ಪೂರಕ ಸಮಾಜ ನಿರ್ಮಾಣಕ್ಕೆ ಮಾಡುವ ಹೂಡಿಕೆಯಾಗಲಿದೆ. ಕೋವಿಡ್ ನಿಂದಾಗಿ ಆರೋಗ್ಯ ಮೂಲಸೌಕರ್ಯದ ಮೇಲೆ ಹೆಚ್ಚಿನ ಒತ್ತಡ ಬಂತು. ಇದರ ಜೊತೆ ಆರ್ಥಿಕವಾಗಿ ಬಹಳ ದೊಡ್ಡ ಪೆಟ್ಟು ಬಿತ್ತು.

ಬೀದಿ ಬದಿ ವ್ಯಾಪಾರಿಯಿಂದ ದೊಡ್ಡ ಕಾರ್ಖಾನೆವರೆಗೂ ಅಭಿವೃದ್ಧಿ ಚಕ್ರ ನಿಂತು ಹೋಗಿತ್ತು. ಇದರಿಂದ ಸರ್ಕಾರಕ್ಕೆ ಬರುವ ತೆರಿಗೆ ತಪ್ಪಿದ್ದು ಒಂದು ಕಡೆಯಾದರೆ, ದುಡಿಯುವವರ ಕೈಯಲ್ಲಿ ಹಣವಿಲ್ಲದಂತಾಗಿತ್ತು. ಇದು ಸಾಮಾಜಿಕ ಸಮಸ್ಯೆಯಾಗಿ ಪರಿವರ್ತನೆಯಾಯಿತು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಕೋವಿಡ್ ನಿಂದಾಗಿ ಸಾಲ ಮಾಡಬೇಕಾಯಿತು :
ಕೋವಿಡ್ ಸಮಯದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮಾಡಿಕೊಟ್ಟ ಅನುಕೂಲದ ಜೊತೆ ಸಮುದಾಯಗಳಿಗೆ ಕೇಂದ್ರ, ರಾಜ್ಯ ಸರ್ಕಾರ ನೆರವು ನೀಡಿತು. ಇದಕ್ಕಾಗಿ ನಾವು ಸಾಲ ಮಾಡಲೇಬೇಕಾಯಿತು. ಕೋವಿಡ್ ವೇಳೆ ಒಂದು ವರ್ಷದಲ್ಲಿ ನಮಗೆ ಬರಬೇಕಿದ್ದ ಜಿಎಸ್ಟಿ ಪರಿಹಾರ 30 ಸಾವಿರ ಕೋಟಿ ನಮ್ಮ ಹೆಸರಿನಲ್ಲಿ ಕೇಂದ್ರ ಸಾಲ ತೆಗೆದು ನಮಗೆ ಕೊಟ್ಟರು. ಆ ಸಾಲವನ್ನು ಕೇಂದ್ರವೇ ತೀರಿಸಲಿದೆ. ಒಂದೇ ವರ್ಷದಲ್ಲಿ 20 ಸಾವಿರ ಕೋಟಿ ನಮಗೆ ಬರಬೇಕಾದ ಆದಾಯ ಕಡಿತವಾಯಿತು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

ನಮ್ಮದು ಉಳಿತಾಯದ ಆರ್ಥಿಕತೆ :
ಕೋವಿಡ್ ಲಾಕ್ ಡೌನ್ ನಲ್ಲಿ ಕೆಲಸಕ್ಕೆ ಪರದಾಡಿ ಗುಳೆ ಹೋಗುವ ಸ್ಥಿತಿ ಬಂದಿತ್ತು. ಸ್ವಾತಂತ್ರ್ಯ ನಂತರ ಮೊದಲ ಬಾರಿ ಇಂತಹ ಸ್ಥಿತಿ ಎದುರಾಯಿತು. ಹಲವಾರು ದೇಶದಲ್ಲಿ ಇನ್ನೂ ಆರ್ಥಿಕ ಚೇತರಿಕೆ ಕಾಣದೇ, ಬೆಲೆ ಏರಿಕೆ ಆರ್ಥಿಕ ಕುಸಿತ ಎದುರಿಸುತ್ತಿವೆ. ಆದರೆ ಭಾರತ ಆರ್ಥಿಕ ಕುಸಿತದಿಂದ ಚೇತರಿಸಿಕೊಂಡಿದೆ.

ಇದು ದೇಶದ ಅಂತರ್ಗತ ಶಕ್ತಿ. ಜತೆಗೆ ನಮ್ಮ ಸಂಸ್ಕೃತಿಯೂ ಕಾರಣ. ನಮ್ಮದು ಉಳಿತಾಯದ ಆರ್ಥಿಕತೆ. ನಾವು ಸಾವಿರ ಗಳಿಸಿದರೆ ನೂರು ರೂ ಉಳಿಸುವ ಆರ್ಥಿಕತೆ ಬೆಳೆಸಿಕೊಂಡಿದ್ದೇವೆ. ಬೇರೆ ದೇಶದ್ದು ವೆಚ್ಚದ ಆರ್ಥಿಕತೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.

ಉಳಿತಾಯ ಬಜೆಟ್ ಮಂಡಿಸಿದ್ದೇನೆ :
72 ಸಾವಿರ ಕೋಟಿ ಸಾಲಕ್ಕೆ ಅನುಮತಿ ಪಡೆದು 68 ಸಾವಿರ ಕೋಟಿ ಮಾತ್ರ ಸಾಲ ಮಾಡಿದ್ದೇವೆ. ರಾಜ್ಯದ ಹಣಕಾಸು ಸ್ಥಿತಿ ಸರಿದಾರಿಗೆ ತಂದು ಉಳಿತಾಯ ಬಜೆಟ್ ಮಂಡಿಸಿದ್ದೇವೆ. ನಾವು 2022-23 ರಲ್ಲಿ 14690 ಕೋಟಿ ಕೊರತೆ ಎಂದು ತೋರಿಸಿ ಬಜೆಟ್ ಮಂಡಿಸಿದ್ದೆ. ಆದರೆ ಈಗ ಆ ಕೊರತೆ 5996 ಕ್ಕೆ ಇಳಿದಿದೆ, ಮಾರ್ಚ್ ಅಂತ್ಯಕ್ಕೆ ಅದು ಉಳಿತಾಯ ಬಜೆಟ್ ನತ್ತ ಪರಿವರ್ತನೆ ಸಾಧ್ಯತೆ ಇದೆ.

3,09,182 ಕೋಟಿ ರೂ ಬಜೆಟ್ ಮಂಡಿಸಿದ್ದೇನೆ. ಕಳೆದ ಬಾರಿಗೆ ಹೋಲಿಸಿದರೆ ಶೇ.16 ಹೆಚ್ಚಾಗಿದೆ. ಪ್ರಥಮ ಬಾರಿ ಇಷ್ಟು ದೊಡ್ಡ ಮಟ್ಟದಲ್ಲಿ ಬಜೆಟ್ ಗಾತ್ರ ಹೆಚ್ಚಿಸಿಯೂ ಉಳಿತಾಯ ಬಜೆಟ್ ಮಂಡಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಬಂಡವಾಳ ವೆಚ್ಚಕ್ಕೆ ಸಾಲ ಮಾಡಿದ್ದೇವೆ :
ರಾಜ್ಯದ ಸಾಲ ಜಿಎಸ್ಡಿಪಿ ಮೇಲೆ ಅವಲಂಬನೆಯಾಗಿರುತ್ತದೆ. ಸಾಲ ಪಡೆಯುವ, ತೀರಿಸುವ ಮಿತಿ ನಿಗದಿಯಾಗಲಿದೆ. ಸಾಲ ಯಾವ ಕಾರಣಕ್ಕೆ ಬಳಕೆ ಮಾಡುತ್ತೇವೆ ಎನ್ನುವುದು ಮುಖ್ಯ. ಸಾಲ ಪಡೆದು ವೇತನ ಪಾವತಿ, ಸಾಲ ತೀರಿಸುವುದು ಮಾಡಿದರೆ ಆತಂಕಕಾರಿ. ಆದರೆ ಆಸ್ತಿ ನಿರ್ಮಾಣ ಮಾಡುವ, ಆರ್ಥಿಕತೆ ವೃದ್ದಿಗೆ ಬಳಸಿದರೆ ಸಾಲಕ್ಕೆ ಸಾರ್ಥಕತೆ ಬರಲಿದೆ. ನಾವು ಮಾಡಿರುವ ಸಾಲವನ್ನು ಬಂಡವಾಳ ವೆಚ್ಚಕ್ಕೆ ಮಾಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ಸಮರ್ಥಿಸಿಕೊಂಡರು.

ಹಿಂದಿನ ಸರ್ಕಾರ 88.3% ಸಾಲ ಮಾಡಿದ್ದರು :
ನಾಲ್ಕು ವರ್ಷದಲ್ಲಿ ನಮಗೆ ಸಾಲ ಮಾಡಲು ಲಭ್ಯವಿದ್ದ ಪ್ರಮಾಣದಲ್ಲಿ  ಶೇ.71 ರಷ್ಟು ಮಾತ್ರ ಸಾಲ ಮಾಡಿದ್ದೇವೆ. ಪ್ರತಿ ವರ್ಷ ಸಾಲ ಮಾಡುವ ಮಿತಿ ಕಡಿಮೆ ಮಾಡುತ್ತಿದ್ದೇವೆ. ನಮ್ಮ ಹಿಂದಿದ್ದವರು 88.3% ಸಾಲ ಮಾಡಿದ್ದರು.

ನೆರೆ ರಾಜ್ಯಕ್ಕೆ ಹೋಲಿಸಿದರೆ ನಾವೇ ಕಡಿಮೆ ಸಾಲ ಮಾಡಿದ್ದೇವೆ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕಡಿಮೆ ಎನ್ನುವ ಆರೋಪ ಮಾಡಿದ್ದಾರೆ. ಆದರೆ ನಮ್ಮ ಅಭಿವೃದ್ಧಿ ಕಾರ್ಯಕ್ಕೆ ಪ್ರತಿ ವರ್ಷ ಅನುದಾನ ಹೆಚ್ಚಿಸುತ್ತಾ ಬಂದಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಬಜೆಟ್ ಸಮರ್ಥವಾಗಿ ಅನುಷ್ಠಾನಕ್ಕೆ ತಂದಿದ್ದೇನೆ :
ನನ್ನ ಬಜೆಟ್ ಅನುಷ್ಠಾನ ಆಗಿಲ್ಲ ಎನ್ನುವ ಆರೋಪ ಮಾಡಿದ್ದಾರೆ. 398 ಘೋಷಣೆಯಲ್ಲಿ ಕೆಲವು ನೀತಿಗೆ ಸಂಬಂಧಿಸಿದ್ದಾಗಿದ್ದು, ಅದನ್ನು ತೆಗೆದರೆ 342 ಘೋಷಣೆ ಉಳಿಯಲಿದೆ. ಅದರಲ್ಲಿ 247 ಯೋಜನೆ ಉದ್ಘಾಟನೆ ಮಾಡಿದ್ದು ಬಾಕಿ ಇರುವ ಯೋಜನೆ ಅನುಷ್ಠಾನ ಹಂತಕ್ಕೆ ಬಂದಿವೆ.

ಇದುವರೆಗೂ ಶೇ.75 ರಷ್ಟು ಅನುದಾನ ವೆಚ್ಚ ಮಾಡಲಾಗಿದೆ. ಮಾರ್ಚ್ ಅಂತ್ಯಕ್ಕೆ ಅದು ಶೇ.90 ದಾಟಿಲಿದೆ. ಮೊದಲ ಬಾರಿ ಈ ಗುರಿ ತಲುಪಲಿದೆ. ಬಜೆಟ್ ಸಮರ್ಥವಾಗಿ ಅನುಷ್ಠಾನಕ್ಕೆ ತಂದಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಎಲ್ಲಾ ರಂಗದಲ್ಲಿ ಅಮೃತ ಯೋಜನೆ ಮಾಡಿದ್ದೇವೆ :
ರೈತಶಕ್ತಿ ಯೋಜನೆ ಅನುಷ್ಠಾನ ಆಗಿದೆ. ರೈತ ವಿದ್ಯಾನಿಧಿ ತಲುಪಿದೆ, ಸ್ತ್ರೀ ಸಾಮರ್ಥ್ಯ ಯೋಜನೆ, ಸಂಜೀವಿನಿ ಯೋಜನೆ, ವಿವೇಕಾನಂದ ಯೋಜನೆ ಅನುಷ್ಠಾನ ಆಗಿದೆ. ಎಸ್ಸಿ ಎಸ್ಟಿ ಸಮುದಾಯ ಯೋಜನೆಗಳು ಅನುಷ್ಠಾನಕ್ಕೆ ಬಂದಿವೆ. ಅವರ ಮೀಸಲಾತಿ ಹೆಚ್ಚಿಸಿದ್ದೇವೆ. ಒಬಿಸಿಗೆ ಹಾಸ್ಟೆಲ್ ಹೆಚ್ಚಿಸುವ ಕೆಲಸ ಮಾಡಿದ್ದೇವೆ. ಕೃಷಿ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಕೃಷಿಗೆ ಅಭಿವೃದ್ಧಿ ಯೋಜನೆ ಜತೆಗೆ ಶೂನ್ಯ ಬಡ್ಡಿಯ ಸಾಲದ ಮಿತಿ ಹೆಚ್ಚಿಸಿದ್ದೇವೆ.

ರೈತರಿಗೆ ಜೀವ ವಿಮೆ ಮಾಡಿದ್ದೇವೆ. ರೈತರ ಆವರ್ತ ನಿಧಿ ಹೆಚ್ಚಿಸಿದ್ದೇವೆ. ಗ್ರಾಮೀಣ ಭಾಗದ ದುಡಿಯುವ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು 1 ಸಾವಿರ ರೂ. ಸಹಾಯ ಸೇರಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದೇವೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚುಟಿ ನಾವು ಕೊಡುತ್ತಿದ್ದೇವೆ. ಹೆಣ್ಣುಮಕ್ಕಳಿಗೆ ಪದವಿ ವರೆಗೆ ಉಚಿತ ಶಿಕ್ಷಣ ಘೊಷಿಸಿದ್ದೇವೆ. ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ಕೊಡುತ್ತಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಧ್ಯಂತರ ವರದಿ ತರಿಸಿಕೊಂಡು 7 ವೇತನ ಆಯೋಗ ಅನುಷ್ಠಾನ :
1 ಲಕ್ಷ ಜನ ಸರ್ಕಾರಿ ನೌಕರರ ಹುದ್ದೆ ಮುಂದಿನ ವರ್ಷ ಭರ್ತಿ ಮಾಡಲಾಗುತ್ತದೆ. ಅಗತ್ಯ ಸೇವೆ ನೋಡಿಕೊಂಡು ಶಿಕ್ಷಕರ, ಉಪನ್ಯಾಸ ಹುದ್ದೆಗಳ ಭರ್ತಿಗೆ ಕ್ರಮ ವಹಿಸುತ್ತೇವೆ. ಹಣಕಾಸು ಲಭ್ಯತೆ ನೋಡಿ ಪರಿಷತ್ ಸದಸ್ಯರ ಅನುದಾನ ಹೆಚ್ಚಳ ಪರಿಗಣಿಸಲಾಗುತ್ತದೆ.

ಪ್ರಥಮ ಬಾರಿ ಅಧಿಕಾರದ ವಿಕೇಂದ್ರೀಕರಣದ ಜೊತೆಗೆ ಹಣಕಾಸಿನ ವಿಕೇಂದ್ರೀಕರಣ ಮಾಡಿದ್ದೇವೆ. ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ರಚನೆ ಕುರಿತು ಮಧ್ಯಂತರ ವರದಿ ತರಿಸಿಕೊಂಡು ಅನುಷ್ಠಾನ ಮಾಡಲಿದ್ದೇವೆ ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.